ADVERTISEMENT

ಹೆಚ್ಚು ಮಳೆ: ಐಹೊಳೆಯ ಚಾಲುಕ್ಯರ ಸ್ಮಾರಕಗಳ ಅಡಿಪಾಯಕ್ಕೆ ಅಪಾಯದ ಆತಂಕ

ಜೀವ ಪಡೆದಿವೆ ನೀರಿನ ಬುಗ್ಗೆ

ವೆಂಕಟೇಶ ಜಿ.ಎಚ್.
Published 26 ಡಿಸೆಂಬರ್ 2020, 19:30 IST
Last Updated 26 ಡಿಸೆಂಬರ್ 2020, 19:30 IST
ಐಹೊಳೆಯ ದುರ್ಗಾದೇವಾಲಯ ಸಂಕೀರ್ಣದಲ್ಲಿ ಬಡಿಗೇರ ಗುಡಿ ನಿವೇಶನ ನೀರಿನಿಂದ ಆವೃತವಾಗಿರುವ ನೋಟ  ಚಿತ್ರ: ಇಂದ್ರಕುಮಾರ ದಸ್ತೇನವರ
ಐಹೊಳೆಯ ದುರ್ಗಾದೇವಾಲಯ ಸಂಕೀರ್ಣದಲ್ಲಿ ಬಡಿಗೇರ ಗುಡಿ ನಿವೇಶನ ನೀರಿನಿಂದ ಆವೃತವಾಗಿರುವ ನೋಟ  ಚಿತ್ರ: ಇಂದ್ರಕುಮಾರ ದಸ್ತೇನವರ   

ಬಾಗಲಕೋಟೆ: ಕಳೆದ ಎರಡು ವರ್ಷ ಸುರಿದ ವಿಪರೀತ ಮಳೆಗೆ ಇಲ್ಲಿನ ಐಹೊಳೆಯ ಚಾಲುಕ್ಯರ ಸ್ಮಾರಕಗಳ ನಿವೇಶನದಲ್ಲಿರುವ ಪುರಾತನ ಕಾಲುವೆ ಜಾಲದಲ್ಲಿ ನೀರಿನ ಬುಗ್ಗೆಗಳು ಜೀವ ಪಡೆದಿವೆ. ಇದರಿಂದ ಸ್ಮಾರಕಗಳ ಅಡಿಪಾಯಕ್ಕೆ ಅಪಾಯದ ಆತಂಕ ಎದುರಾಗಿದೆ.

ಐಹೊಳೆಯ ಜ್ಯೋತಿರ್ಲಿಂಗ ದೇವಾಲಯ ಸಂಕೀರ್ಣ, ದುರ್ಗಾ ದೇವಾಲಯದ ಸಂಕೀರ್ಣದಲ್ಲಿನ ಬಡಿಗೇರ ಗುಡಿ (ಸೂರ್ಯ ದೇವಾಲಯ) ಹಾಗೂ ಅಂಬಿಗೇರ ದೇವಾಲಯಗಳ ಸಮುಚ್ಛಯದಲ್ಲಿ ನೀರಿನ ಬುಗ್ಗೆಗಳು ಜೀವ ಪಡೆದಿವೆ. ಹಿಂದಿನ ಎರಡು ಮಳೆಗಾಲದಲ್ಲಿ ಐಹೊಳೆಯ ಈ ಮೂರು ಸ್ಮಾರಕಗಳು ಜಲಾವೃತವಾಗಿದ್ದವು.

ಈಗ ಮಳೆಗಾಲ ಮುಗಿದು ಎರಡು ತಿಂಗಳಾದರೂ ಸ್ಮಾರಕಗಳ ನಿವೇಶನದಲ್ಲಿ ಸಂಗ್ರಹಗೊಂಡ ನೀರು ಕಡಿಮೆಯಾಗದ ಕಾರಣ ಪರಿಶೀಲನೆ ನಡೆಸಿದಾಗ ಭೂಮಿಯಿಂದ ಮೇಲಕ್ಕೆ ನೀರು ಬುಗ್ಗೆಯ ರೂಪದಲ್ಲಿ ಬಸಿಯುತ್ತಿರುವುದು ಕಂಡುಬಂದಿದೆ. ಈಗಸ್ಮಾರಕಗಳ ಸುತ್ತಲೂ ಸಂಗ್ರಹವಾಗುತ್ತಿರುವ ನೀರನ್ನು ಮೋಟಾರುಗಳ ಮೂಲಕ ಹೊರಗೆ ಹಾಕಲಾಗುತ್ತಿದೆ. ನೀರು ಖಾಲಿಯಾದಂತೆ ಮತ್ತೆ ತುಂಬಿಕೊಳ್ಳುತ್ತಿದೆ. ಇದುಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ತಲೆನೋವಾಗಿ ಪರಿಣಮಿಸಿದೆ.

ADVERTISEMENT

ಐಹೊಳೆ ಪರಿಸರದಲ್ಲಿ ಮಳೆ ಪ್ರಮಾಣ ಹೆಚ್ಚಳಗೊಂಡಿದೆ. ಇದರಿಂದ ಮಲ್ಲಿಕಾರ್ಜುನ ಗುಡಿ ಸಂಕೀರ್ಣ ಬಳಿಯ ಕೆರೆ ತುಂಬಿದೆ. ಹೀಗಾಗಿ ಸ್ಮಾರಕಗಳ ಪರಿಸರದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ಹಳೆಯ ಕಾಲುವೆ ನೀರಿನ ಜಾಲ ಮತ್ತೆ ಜೀವ ಪಡೆದಿದೆ. ಅದೀಗ ನೀರಿನ ಬುಗ್ಗೆಗಳ ಸ್ವರೂಪ ಪಡೆದಿದೆ ಎಂದು ಐಹೊಳೆಯ ಭಾರತೀಯ ಪುರಾತತ್ವ ಇಲಾಖೆ ಕಚೇರಿಯ ಸಿಬ್ಬಂದಿ ಹೇಳುತ್ತಾರೆ.

ಚರಂಡಿ ನೀರು ಸೇರ್ಪಡೆ:ಚಾಲುಕ್ಯರ ಸ್ಮಾರಕಗಳ ಸಮೀಪದಲ್ಲಿಯೇ ಗ್ರಾಮ ಪಂಚಾಯಿತಿಯ ಒಳಚರಂಡಿಯ ನೀರು ಹರಿದು ಹೋಗುತ್ತಿದೆ. ಲೋಕೋ ಪಯೋಗಿ ಇಲಾಖೆಯವರು ಅಲ್ಲಿ ರಸ್ತೆ ಮಾಡುವಾಗ ಅದನ್ನು ಮುಚ್ಚಿದ್ದಾರೆ. ಮುಂದೆ ಹರಿದು ಹೋಗಲು ಸಾಧ್ಯವಾಗದ ಚರಂಡಿ ನೀರು ಈ ಜಾಲದಲ್ಲಿ ಸೇರಿಕೊಂಡಿದೆ. ಇದರಿಂದ ಸ್ಮಾರಕಗಳ ಪರಿಸರದಲ್ಲಿ ಅಸಹನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

ದಾಖಲೀಕರಣಕ್ಕೆ ಸಿದ್ಧತೆ..‌
‘ತಜ್ಞರ ಪರಿಶೀಲನೆ ವೇಳೆ ಐಹೊಳೆಯ ಚಿಕ್ಕಿಗುಡಿಯಿಂದ ದುರ್ಗಾ ದೇವಾಲಯ ಸಂಕೀರ್ಣದವರೆಗೆ ಚಾಲುಕ್ಯರ ಕಾಲದ ಹಳೆಯ ಭೂಗತ ಕಾಲುವೆ ಜಾಲ ಹರಡಿಕೊಂಡಿರುವುದು ಹಾಗೂ ಅದು ಮುಂದೆ ಮಲಪ್ರಭಾ ನದಿಗೆ ಸಂಪರ್ಕಗೊಂಡಿದೆ ಎಂಬುದು ಗೊತ್ತಾಗಿದೆ’ ಎಂದು ಭಾರತೀಯ ಪುರಾತತ್ವ ಇಲಾಖೆ ಧಾರವಾಡ ವೃತ್ತದ ಸೂಪರಿಟೆಂಡೆಂಟ್ ವಿಠ್ಠಲ ಎಸ್.ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಮಾರಕಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಈ ಜಾಲವನ್ನು ಹುಡುಕಾಡಿ ನೀರು ಹರಿದು ಹೋಗುವಂತೆ ಮಾಡಲು ಈಗಾಗಲೇ ದಾಖಲೀಕರಣ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ.ಮುಂದಿನ ಮಳೆಗಾಲದ ವೇಳೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ’ ಎನ್ನುತ್ತಾರೆ ಅವರು.

***

ನೀರಿನ ಸಂಗ್ರಹದಿಂದ ಸ್ಮಾರಕಗಳ ಅಡಿಪಾಯಕ್ಕೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಆದ್ಯತೆಯ ಮೇರೆಗೆ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ.
-ವಿಠ್ಠಲ ಎಸ್.ಬಡಿಗೇರ,ಭಾರತೀಯ ಪುರಾತತ್ವ ಇಲಾಖೆ, ಧಾರವಾಡ ವೃತ್ತದ ಸೂಪರಿಟೆಂಡೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.