
ಬನಶಂಕರಿ (ಬಾದಾಮಿ): ಬಾನಲ್ಲಿ ನೇಸರನ ಹೊಂಗಿರಣ ಮೂಡುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಆದಿಶಕ್ತಿ ಬನಶಂಕರಿದೇವಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖಂದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು.
ರಥದ ಮೇಲೆ ವೈವಿಧ್ಯಮಯ ವರ್ಣದ ಪತಾಕೆಗಳ ಜೊತೆ ಪುಷ್ಪಮಾಲೆ, ಬಾಳೆಯಿಂದ ಅಲಂಕರಿಸಲಾಗಿತ್ತು. ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಾಡಲಗೇರಿ ಗ್ರಾಮದ ಭಕ್ತರು ತಂದಿದ್ದ ಹಗ್ಗ ಜೋಡಿಸಲಾಯಿತು.
ಸಂಜೆ 5 ಗಂಟೆಯಾಗುತ್ತಿದ್ದಂತೆ ಭಕ್ತರು ಶ್ರದ್ದಾ–ಭಕ್ತಿಯಿಂದ ‘ಬನಶಂಕರಿದೇವಿ ಶಂಭೂಕೊ... ಆದಿಶಕ್ತಿ ಪರಮೇಶ್ವರಿ ಶಂಭೂಕೊ...’ ಎಂದು ಕೂಗುತ್ತ ರಥ ಎಳೆದರು. ಭಕ್ತರ ಹರ್ಷೊದ್ಘಾರ ಮುಗಿಲು ಮುಟ್ಟಿತ್ತು.
ರಥದ ಚಕ್ರಕ್ಕೆ ತೆಂಗಿನಕಾಯಿ ಅರ್ಪಿಸಿದರು. ಉತ್ತುತ್ತಿ, ಬಾಳೆಹಣ್ಣು, ಲಿಂಬೆಕಾಯಿ ಎಸೆದು ಹರಕೆ ಸಲ್ಲಿಸಿದರು. ರಥೋತ್ಸವ ಸಂಪನ್ನವಾದ ನಂತರ ಭಕ್ತರು ಚಪ್ಪಾಳೆ ತಟ್ಟಿ, ನಮಿಸಿದರು.
ಬನಶಂಕರಿ ಸಮೀಪ ಲಾರಿ ಮತ್ತು ಕಬ್ಬಿನ ಟ್ರ್ಯಾಕ್ಟರ್ಗಳು ನಿಂತ ಕಾರಣ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಯಿತು. ಅಲ್ಲಲ್ಲಿ ನೂಕಾಟ–ತಳ್ಳಾಟ ಉಂಟಾಯಿತು. ವೃದ್ಧರು, ಮಹಿಳೆಯರು, ಮಕ್ಕಳು 5 ಕಿ.ಮೀ ನಡೆದೇ ಬಂದರು.
ಹಂಪಿ ಹೇಮಕೂಟದ ದಯಾನಂದ ಪುರಿ ಸ್ವಾಮೀಜಿ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.