ADVERTISEMENT

ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:27 IST
Last Updated 19 ಜನವರಿ 2026, 7:27 IST
<div class="paragraphs"><p>ಬನಶಂಕರಿ ಜಾತ್ರೆ</p></div>

ಬನಶಂಕರಿ ಜಾತ್ರೆ

   

ಬಾಗಲಕೋಟೆ: ಉತ್ತರ ಕರ್ನಾಟಕದ ಧಾರ್ಮಿಕ ಪುಣ್ಯ ಕ್ಷೇತ್ರ ಆದಿಶಕ್ತಿ ಬನಶಂಕರಿದೇವಿ ಜಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯಗಳ ಭಕ್ತರು ದೇವಿಗೆ ಭಕ್ತಿಯ ಪೂಜೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವ ಜೊತೆಗೆ ನಾಟಕಗಳನ್ನು ವೀಕ್ಷಿಸಿ ಮನರಂಜನೆ ಪಡೆಯುತ್ತಿದ್ದಾರೆ.

ತಿಂಗಳವರೆಗೆ ನಡೆಯುವ ಜಾತ್ರೆಯು ಎರಡು ವಾರಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೂ ಹದಿನೈದು ದಿನಗಳ ಕಾಲ ಭರ್ಜರಿಯಾಗಿ ನಡೆಯಲಿದೆ.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೇ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದಲೂ ಭಕ್ತರು ಬರುತ್ತಿದ್ದಾರೆ.

ಈಗಿನ ಬನಶಂಕರಿ ದೇವಾಲಯದ ಉತ್ತರದಲ್ಲಿ ಭೂಮಿಯಲ್ಲಿ ಅರ್ಧಹೂತಂತಿರುವ ರಾಷ್ಟ್ರಕೂಟರ ಕಾಲದ ಬನಶಂಕರಿ ದೇವಾಲಯವಿದೆ. 11ನೇ ಶತಮಾನದ ಶಾಸನದಲ್ಲಿ ‘ಬನದ ದೇವಿ’, ‘ಬನದ ಮಹಾಮಾಯಿ’ ಎಂದು ಉಲ್ಲೇಖಿಸಲಾಗಿದೆ ಎಂದು ಹಿರಿಯ ಸಂಶೋಧಕ ಅ.ಸುಂದರ ಉಲ್ಲೇಖಿಸಿದ್ದಾರೆ.

ಈಗಿರುವ ದೇವಾಲಯವನ್ನು 17ನೇ ಶತಮಾನದಲ್ಲಿ ಸಾತಾರೆಯ ಪರಶುರಾಮ ನಾಯಿಕ ಆನಗಳೆ ಎಂಬವರು ನಿರ್ಮಿಸಿದರು. ಕಪ್ಪುಶಿಲೆಯ ಸಿಂಹಾರೂಢಳಾಗಿರುವ ಮೂರ್ತಿಯನ್ನು ಮರಾಠಾ ಶಿಂಧೆ ಮನೆತನದವರು ಪ್ರತಿಷ್ಠಾಪಿಸಿದರು ಎಂದು ಪೀಠದಲ್ಲಿರುವ ಶಾಸನ ಹೇಳುತ್ತದೆ.

ಹೊಳೆ ಆಲೂರಿನ ಕಲಾತ್ಮಕ ಬಾಗಿಲು ಚೌಕಟ್ಟು, ಜಾಲಿಹಾಳ ಗ್ರಾಮದ ಕಲಾವಿದರು ಗೋಮಯದಿಂದ ರೂಪಿಸಿದ ಕಿಟ್ಟದ ಬೊಂಬೆಗಳು ಅಧಿಕವಾಗಿ ಮಾರಾಟವಾಗುತ್ತವೆ. ಕುಟುಂಬಕ್ಕೆ ಬೇಕಾದ ಎಲ್ಲ ಸಾಮಗ್ರಿಗಳೂ ಇಲ್ಲಿ ದೊರೆಯುತ್ತವೆ. ‘ಅಪ್ಪ–ಅಮ್ಮನನ್ನು ಹೊರತುಪಡಿಸಿ ಬನಶಂಕರಿ ಜಾತ್ರೆಯಲ್ಲಿ ಎಲ್ಲವೂ ಸಿಗುತ್ತದೆ ಎಂಬ ಮಾತು ಜನಜನಿತವಾಗಿದೆ.

ನಾಟಕಗಳ ಜೋಶ್: ರಾಜ್ಯದ ಹತ್ತು ವೃತ್ತಿ ರಂಗಭೂಮಿ ನಾಟಕ ಸಂಸ್ಥೆಗಳು ಬನಶಂಕರಿ ಜಾತ್ರೆಯಲ್ಲಿ ತಿಂಗಳುಗಟ್ಟಲೇ ಪ್ರದರ್ಶನ ಮಾಡುತ್ತವೆ.

ದಿನಕ್ಕೆ ನಾಲ್ಕು ಪ್ರದರ್ಶನಗಳಿರುತ್ತವೆ. ಮಧ್ಯಾಹ್ನ 2.30ಕ್ಕೆ ಪ್ರದರ್ಶನ ಆರಂಭವಾದರೆ ಬೆಳಿಗಿನ ಜಾವ 4.30ಕ್ಕೆ ಮುಗಿಯುತ್ತದೆ.

ಗಮನ ಸೆಳೆಯುವ ನಾಟಕಗಳ ಹೆಸರು: ‘ಗಿಚ್ಚ ಗಿಲಿಗಿಲಿ ಗಾಯತ್ರಿ’, ‘ಗಂಗಿ ನೀ ಜಗ್ಗಬ್ಯಾಡ ಲುಂಗಿ’, ‘ಸೋಗಲಾಡಿ ಸುಂದ್ರಿ’, ‘ನಿಂಗಿ ಗತ್ತು ಸಂಗ್ಯಾ ಗೊತ್ತು’, ‘ಹುಬ್ಬ ಹಾರಸ್ಯಾಳ ಜಾತ್ರ್ಯಾಗ ಧೂಳ ಎಬ್ಬಿಸ್ಯಾಳ’, ‘ರಚ್ಚು ಹಿಡದೈತಿ ನಿನ್ನ ಹುಚ್ಚು’, ‘ಜವಾರಿ ಹೆಣ್ಣು ಹೊಡಿಬ್ಯಾಡ ಕಣ್ಣು’, ‘ಪಕ್ಕದಮನಿ ಚಂದ್ರಿ ನೋಡಾಕ ನೀ ಸುಂದ್ರಿ’, ‘ಮುತ್ತಿನಂಥ ಅತ್ತಿಗೆ’ ನಾಟಕಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ.

‘ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನಗೊಂಡಷ್ಟು ನಾಟಕಗಳು ರಾಜ್ಯದ ಬೇರೆ ಯಾವ ಜಾತ್ರೆಯಲ್ಲಿಯೂ ಪ್ರದರ್ಶನಗೊಳ್ಳುವುದಿಲ್ಲ. ಕಲೆಕ್ಷನ್‌ ಸಹ ಬಹಳ ಉತ್ತಮವಾಗಿರುತ್ತದೆ. ನಾಟಕಗಳಿಗೆ ಜಾತ್ರೆ ಸಂಜೀವಿನಿಯಾಗಿದೆ’ ಎಂದು ನಾಟಕಕಾರ ರಾಜಣ್ಣ ಜೇವರ್ಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.