ADVERTISEMENT

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು

ಕಾಂಗ್ರೆಸ್‌ನಿಂದ ಮೇಟಿ ಕುಟುಂಬದ ಮೂವರು, ಬಿಜೆಪಿಯಿಂದ ಚರಂತಿಮಠ ಆಕಾಂಕ್ಷಿ

ಬಸವರಾಜ ಹವಾಲ್ದಾರ
Published 10 ಜನವರಿ 2026, 0:13 IST
Last Updated 10 ಜನವರಿ 2026, 0:13 IST
<div class="paragraphs"><p>ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ನಕ್ಷೆ</p></div>

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ನಕ್ಷೆ

   

ಬಾಗಲಕೋಟೆ: ಶಾಸಕರಾಗಿದ್ದ ಎಚ್‌.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾದರೆ, ಆಡಳಿತ ವಿರೋಧಿ ಅಲೆಯ ಸಾಬೀತು ಮಾಡುವ ಉಮೇದಿನಲ್ಲಿ ಬಿಜೆಪಿ ಇದೆ.

ಸಚಿವ ಸತೀಶ ಜಾರಕಿಹೊಳಿ ಈಚೆಗೆ ಬಾಗಲಕೋಟೆಗೆ ಬಂದಾಗ ಮುಖಂಡರಿಗೆ ಉಪಚುನಾವಣೆಗೆ ಸಿದ್ಧರಾಗಿರುವಂತೆ ಸೂಚಿಸಿದ್ದು ಅಲ್ಲದೇ ಕ್ಷೇತ್ರದ ಮಾಹಿತಿ ಪಡೆದಿದ್ದಾರೆ. ಅಭ್ಯರ್ಥಿ ಆಯ್ಕೆ, ಗೆಲುವಿನ ಲೆಕ್ಕಾಚಾರ ಕುರಿತು ಕಾಂಗ್ರೆಸ್‌ನಿಂದ ಸರ್ವೆ ಆರಂಭಗೊಂಡಿದೆ.

ADVERTISEMENT

ಇನ್ನೊಂದೆಡೆ ಬೆಂಗಳೂರಿನಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಮಾಜಿ ಸಂಸದ ಸದಾನಂದಗೌಡ ಸಭೆ ನಡೆಸಿದ್ದಾರೆ. ಪಕ್ಷದಲ್ಲಿನ ಒಳಜಗಳ ಬಗೆಹರಿಸಲು ಪ್ರಯತ್ನಿಸುವುದರ ಜೊತೆಗೆ ಗೆಲುವಿಗೆ ಬೇಕಾದ ಸಿದ್ದತೆಯನ್ನು ಬಿಜೆಪಿ ಮಾಡುತ್ತಿದೆ.

‘ಎಚ್‌.ವೈ.ಮೇಟಿ ಅವರ ಕುಟುಂಬಕ್ಕೆ ಟಿಕೆಟ್‌ ನೀಡಬೇಕು’ ಎಂಬ ಕೂಗು ಕಾಂಗ್ರೆಸ್‌ನಲ್ಲಿ ಜೋರಾಗಿದೆ. ಮೇಟಿ ಅವರ ಕುಟುಂಬದಲ್ಲಿ ಪುತ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಪುತ್ರರಾದ ಮಲ್ಲಿಕಾರ್ಜುನ ಮೇಟಿ ಹಾಗೂ ಉಮೇಶ ಮೇಟಿ ಹೆಸರುಗಳು ಚಾಲ್ತಿಯಲ್ಲಿವೆ.

ಮೇಟಿ ಅವರ ನಿಧನಕ್ಕೂ ಮುನ್ನ ಬಾಯಕ್ಕ ಮೇಟಿ ಹೊರತುಪಡಿಸಿದರೆ, ಪುತ್ರರಿಬ್ಬರೂ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ನಿಧನ ಬಳಿಕ ಎಲ್ಲ ಕಾರ್ಯಕ್ರಮಗಳಲ್ಲಿ ಪುತ್ರರಿಬ್ಬರೂ ಹಾಜರಾಗುವ ಮೂಲಕ ಉಮೇದುವಾರಿಕೆಗೆ ಸಿದ್ಧತೆ ನಡೆಸಿದ್ದಾರೆ.

ಎಚ್‌.ವೈ. ಮೇಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಜತೆಗೆ ಅವರು ಮುಖ್ಯಮಂತ್ರಿಯವರ  ಸಮುದಾಯಕ್ಕೆ ಸೇರಿದವರು. ಹೀಗಾಗಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಮಾತೇ ಅಂತಿಮವಾಗುವ ಸಾಧ್ಯತೆ ಹೆಚ್ಚಿದೆ.

ಬಿಜೆಪಿಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಕಳೆದ ಚುಣಾವಣೆಯಲ್ಲಿ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸಹೋದರ ಮಲ್ಲಿಕಾರ್ಜುನ ಚರಂತಿಮಠ 10 ಸಾವಿರ ಮತಗಳನ್ನು ಪಡೆದು ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಈಗ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ವಿಧಾನ ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ ನಡುವಿನ ಕಿತ್ತಾಟ ಮುಂದುವರೆದಿದೆ. ‘ಇಬ್ಬರೂ ನಾಯಕರ ಭಿನ್ನಮತ ಶಮನಗೊಳಿಸುವ ಕೆಲಸ ಆಗಬೇಕಿದೆ’ ಎನ್ನುವುದು ಮುಖಂಡರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.