
ಕಬ್ಬಿನ ಗಾಡಿಗಳಿಗೆ ಬೆಂಕಿ
ಬಾಗಲಕೋಟೆ: ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ ತಾಲ್ಲೂಕುಗಳಲ್ಲಿ ನ.13ರ ರಾತ್ರಿಯಿಂದ ನ.16ರ ಬೆಳಿಗ್ಗೆ 8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಸಂಗಪ್ಪ, ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಿಚ್ಚಿ ಪ್ರತಿಭಟನೆ ಮಾಡಲಾಗುತ್ತಿದೆ. ಹೆಚ್ಚಿನ ಹಾನಿಯಾಗದಂತೆ ತಡೆಯಲು ಪ್ರತಿಭಟನೆ, ಮುಷ್ಕರ, ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮುಧೋಳ (ಬಾಗಲಕೋಟೆ): ಸಮೀರವಾಡಿಯ ಗೋದಾವರಿ ಬಯೋರಿಪೈನರಿ ಸಕ್ಕರೆ ಕಾರ್ಖಾನೆ ಕೇನ್‌ಯಾರ್ಡ್‌ನಲ್ಲಿ ನಿಂತಿದ್ದ 50ಕ್ಕೂ ಹೆಚ್ಚು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಗುರುವಾರ ಸಂಜೆ ಬೆಂಕಿ ಹಚ್ಚಿದ್ದಾರೆ.
ಕಾರ್ಖಾನೆಯ ಆರಂಭ ಮಾಡಲಾಗಿದೆ ಎಂಬ ಸುದ್ದಿ ತಿಳಿದ ರೈತರು ಮುತ್ತಿಗೆ ಹಾಕಲು ವಾಹನಗಳಲ್ಲಿ ಕಾರ್ಖಾನೆಯತ್ತ ಹೊರಟರು. ಸಂಗಾನಟ್ಟಿ ಕ್ರಾಸ್ ಬಳಿ ಎದುರಾದ ಟ್ರ್ಯಾಕ್ಟರ್‌ಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಕೂಡಲೇ ಕಾರ್ಖಾನೆಯವರು ನೀರಿನ ವಾಹನ ಕಳುಹಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು.
ಕಾರ್ಖಾನೆಗೆ ಹೋದಾಗ 15ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ನಿಂತಿದ್ದವು. ಕೂಡಲೇ ಅವುಗಳತ್ತ ನುಗ್ಗಿದ ಅವರು, ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದರು. ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿ ಉರಿಯತೊಡಗಿತು.
ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಿದ್ದರಿಂದ ಇಂತಹ ಅನಾಹುತವಾಗಿದೆ. ಹಾನಿ ಮಾಡುವುದು ರೈತ ಸಂಘದ ನೀತಿಯಲ್ಲ. ಕಿಡಿಗೇಡಿಗಳು ಮಾಡಿದ್ದಾರೆ ಎಂದು ಮುಖಂಡ ಮುತ್ತಪ್ಪ ಕೋಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.