
ಬಾಗಲಕೋಟೆ: ‘ಸರ್ಕಾರಿ ಇಲಾಖೆಗಳೊಂದಿಗೆ ಬ್ಯಾಂಕ್‍ಗಳು ಸಮನ್ವಯ, ಸಹಕಾರ ನೀಡಿದಾಗ ಮಾತ್ರ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಲೀಡ್ ಬ್ಯಾಂಕ್ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲ, ಅವುಗಳನ್ನು ಅನುಷ್ಠಾನಗೊಳಿಸುವುದು ಕೂಡ ಮುಖ್ಯವಾಗಿರುತ್ತದೆ’ ಎಂದರು.
‘ಫಲಾನುಭವಿಗಳನ್ನು ಅನಗತ್ಯವಾಗಿ ಅಲೆದಾಡಿಸುವುದನ್ನು ಬಿಟ್ಟು, ಪ್ರಾಥಮಿಕ ಹಂತದಲ್ಲೇ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಬ್ಯಾಂಕ್ ಅಧಿಕಾರಿಗಳು ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು’ ಎಂದು ಸೂಚಿಸಿದರು.
‘ಸರ್ಕಾರದ ವಿವಿಧ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಮಾರ್ಗದರ್ಶನ ನೀಡಬೇಕು. ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
‘ಜನರಿಗೆ ತೊಂದರೆ ಕೊಡದೆ, ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಬೇಕು. ಯಾವ, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಫಲಕಗಳಲ್ಲಿ ಪ್ರದರ್ಶಿಸಿ, ತಾಂತ್ರಿಕ ತೊಂದರೆಗಳಿದ್ದಲ್ಲಿ ತಿಳಿಸಿ, ಅವಶ್ಯಕತೆ ಇರುವವರಿಗೆ ಆಧ್ಯತೆ ಮೇರೆಗೆ ಸಾಲ ಸೌಲಭ್ಯ ನೀಡಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂಂತೆ ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.
‘ಇಲಾಖೆಯ ಅಧಿಕಾರಿಗಳು ಬ್ಯಾಂಕ್‍ಗಳಿಗೆ ತೆರಳಿ ಆಸಕ್ತಿ ವಹಿಸಿ ವಿವಿಧ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ದೊರಕಿಸಿಕೊಡಿ, ಸಣ್ಣಪುಟ್ಟ ಕಾರಣಕ್ಕೆ ತಡೆ ಹಿಡಿಸುವ ಕೆಲಸ ಮಾಡಬೇಡಿ ಎಂದು ಅಂಬೇಡ್ಕರ್ ನಿಗಮ ಸೇರಿ ವಿವಿಧ ನಿಗಮಗಳ ಅಧಿಕಾರಿಗಳಿಗೆ’ ಅವರು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ‘ಬಾಕಿ ಉಳಿದಿರುವ ಸಾಲದ ಅರ್ಜಿಗಳನ್ನು ಹದಿನೈದು ದಿನದೊಳಗಾಗಿ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.
ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಆರ್‌ಬಿಐ ಬ್ಯಾಂಕ್ ಅಧಿಕಾರಿ ವಿಜಯಶ್ರೀ, ನಬಾರ್ಡ್‌ನ ಡಿ.ಎಂ. ಮಂಜುನಾಥ ರೆಡ್ಡಿ ಇದ್ದರು.