
ಕೂಡಲಸಂಗಮ: ಚಿತ್ರದುರ್ಗ- ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 50ರ ಹುನಗುಂದ-ವಿಜಯಪುರ ನಡುವಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು ಗುಂಡಿಗಳಿಂದ ತುಂಬಿದೆ. ನಿತ್ಯ ಸಂಚರಿಸುವ ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.
ಹುನಗುಂದ- ಕೂಡಲಸಂಗಮ ಕ್ರಾಸ್- ನಿಡಗುಂದಿ ಮಾರ್ಗ ಸಂಪೂರ್ಣ ಹಾಳಾಗಿದ್ದು, ರಸ್ತೆ ಮಧ್ಯೆ ಅಧಿಕ ತಗ್ಗು ಗುಂಡಿಗಳು ತುಂಬಿವೆ. ಕೆಲವು ಕಡೆ ರಸ್ತೆಯೇ ಕಿತ್ತು ಹೊಗಿದೆ. ನಿತ್ಯ ದ್ವಿಚಕ್ರ ವಾಹನ ಸವಾರರು ತಗ್ಗು ಗುಂಡಿಯಿಂದ ಬೀಳುವ ದೃಶ್ಯ ಸಾಮಾನ್ಯವಾಗಿವೆ. ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ಸಂಚಾರ ಮಾಡುವುದೇ ಕಷ್ಟವಾಗಿದೆ.
ಬೆಂಗಳೂರು- ತುಮಕೂರ- ಚಿತ್ರದುರ್ಗ- ಹೊಸಪೇಟೆ- ವಿಜಯಪುರ- ಸೊಲ್ಲಾಪೂರ ನಡುವೆ ಸಂಪರ್ಕ ಕಲ್ಲಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಈ ಮಾರ್ಗದಲ್ಲಿ ಅಧಿಕ ಬೃಹತ್ ವಾಹನಗಳು ಸಂಚರಿಸುತ್ತವೆ. ಐತಿಹಾಸಿಕ ಪ್ರವಾಸಿ ತಾಣಗಳು, ಧಾರ್ಮಿಕ ತಾಣಗಳು ಇರುವುದರಿಂದ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ.
ಹೆದ್ದಾರಿಯ ಹಲವು ಕಡೆ ರಸ್ತೆ ತಿರುವು, ರಸ್ತೆ ವಿಭಜನೆ, ಅಪಘಾತ ವಲಯ, ಜನದಟ್ಟನೆ ಪ್ರದೇಶದ ಸೂಚನಾ ಫಲಕ ಇಲ್ಲದೇ ಇರುವುದರಿಂದ ಅಪಘಾತಗಳು ಅಧಿಕಗೊಂಡಿವೆ.
ಕೂಡಲಸಂಗಮ ಕ್ರಾಸ್, ಬೆಳಗಲ್ಲ ಕ್ರಾಸ್‌ನಲ್ಲಿ ಫ್ಲೈ ಓವರ್ ಕಾಮಕಾರಿ ನಡೆದಿದ್ದು, ಬಸ್‌ಗಳು ನಿಲ್ಲಲು ಸೂಕ್ತ ಜಾಗ ಇಲ್ಲದೇ ಜನರು ಬಸ್ ಹತ್ತಲು, ಇಳಿಯಲು ತೊಂದರೆ ಅನುಭವಿಸುತ್ತಿದ್ದಾರೆ. ಬೃಹತ್ ವಾಹನಗಳು ಬಂದಾಗ ವಾಹನ ದಟ್ಟಣೆ ಅಧಿಕಗೊಂಡು ರಸ್ತೆ ದಾಟಲು ಜನರು ತೊಂದರೆ ಅನುಭವಿಸುವಂತಾಗಿದೆ.
‘ರಸ್ತೆ ಸಂಪೂರ್ಣ ತಗ್ಗು ಗುಂಡಿಗಳಿಂದ ತುಂಬಿದೆ. ಗುಂಡಿ ತಪ್ಪಿಸಲು ಹೋದರೆ ಅಪಾಯ ನಿಶ್ಚಿತ. ರಾತ್ರಿ ವೇಳೆಯಲ್ಲಿ ಸಂಚರಿಸಿದರೆ ಗುಂಡಿಗೆ ಬೀಳುವುದು ನಿಶ್ಚಿತ’ ಎಂದು ದ್ವಿಚಕ್ರ ವಾಹನ ಸವಾರ ಪರಶುರಾಮ ಕುರಿ ಹೇಳಿದರು.
‘ಹೆದ್ದಾರಿಯಲ್ಲಿ ಸಂಚರಿಸಲು ಅಧಿಕ ಪ್ರಮಾಣದ ಟೋಲ್ ಶುಲ್ಕ ಪಾವತಿಸುತ್ತೇವೆ. ರಸ್ತೆ ದುರಸ್ತಿ ಮಾಡದೇ ಇದ್ದರೆ ಹೇಗೆ? ನಿತ್ಯ ಸಾವಿರಾರು ಬೃಹತ್ ವಾಹನಗಳು ಸಂಚರಿಸುವ ರಸ್ತೆ ಹಾಳಾಗಿರುವುದರಿಂದ ಸಂಚರಿಸಲು ತೊಂದರೆಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಮಾಡಬೇಕು’ ಎಂದು ಲಾರಿ ಚಾಲಕ ನಿಂಗಪ್ಪ ಪಾಟೀಲ ಒತ್ತಾಯಿಸಿದರು.
ಹುನಗುಂದ- ನಿಡಗುಂದಿ ಮಾರ್ಗ ಸಂಪೂರ್ಣ ಹಾಳಾಗಿದೆ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದೆವೆ ಕೂಡಲೇ ದುರಸ್ತಿ ಮಾಡಬೇಕು.-ಮಹಾಂತೇಶ ಕುರಿ, ಕೂಡಲಸಂಗಮ ಗ್ರಾಮಸ್ಥ
ರಾಷ್ಟ್ರೀಯ ಹೆದ್ದಾರಿ 50ರ ಹುನಗುಂದ- ವಿಜಯಪುರ ನಡುವಿನ ರಸ್ತೆ ದುರಸ್ತಿ ಕಾರ್ಯ ಆರಂಭಗೊಂಡಿದ್ದು ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.-ದತ್ತಾತ್ರೆಯ ನಾಯಕ, ವ್ಯವಸ್ಥಾಪಕ ಸಿಬ್ಬಂದಿ ವಿಜಯಪುರ- ಹುನಗುಂದ ಟೋಲ್ ವೇ ಪ್ರೈವೆಟ್ ಲಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.