ಬಾಗಲಕೋಟೆ ಜಿಲ್ಲೆಯ ಹಿರೇಪಡಸಲಗಿ ಗ್ರಾಮದ ಹೊಲದಲ್ಲಿ ಪತ್ತೆಯಾದ ಮೊಸಳೆ (ಸಂಗ್ರಹ ಚಿತ್ರ)
ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ನದಿ ತೀರದಲ್ಲಿನ ಮಾನವ ಹಾಗೂ ಮೊಸಳೆಗಳ ನಡುವಿನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಮೊದಲ ಬಾರಿಗೆ ಜಿಲ್ಲೆಯ ಐದು ಕಡೆ ತಂತಿ ಬೇಲಿ ನಿರ್ಮಿಸಲು ಉದ್ದೇಶಿಸಿದೆ.
ಕೃಷ್ಣಾ, ಘಟಪ್ರಭಾ ನದಿಯಲ್ಲಿ ಹೆಚ್ಚಿರುವ ಮೊಸಳೆಗಳು, ನದಿ ತೀರದ ಗ್ರಾಮಗಳ ಜನರು, ಜಾನುವಾರುಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತವೆ. ಸಿಕ್ಕಿಬೀಳುವ ಮೊಸಳೆಗಳನ್ನು ಹಿಡಿದು, ಆಲಮಟ್ಟಿ ಹಿನ್ನೀರಿನಲ್ಲಿ ಬಿಡಲಾಗುತ್ತದೆ.
2023ರಲ್ಲಿ ಮೂರು ಜಾನುವಾರುಗಳ ಮೇಲೆ ದಾಳಿ ಮಾಡಿದ್ದು, ₹15 ಸಾವಿರ ಪರಿಹಾರ ನೀಡಲಾಗಿದೆ. ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದು, ₹11.4 ಲಕ್ಷ ಪರಿಹಾರ ವಿತರಿಸಲಾಗಿದೆ.
2024ರಲ್ಲಿ ಮೂರು ಜಾನುವಾರುಗಳ ಮೇಲೆ ದಾಳಿ ನಡೆದಿದ್ದು, ₹15 ಸಾವಿರ ಪರಿಹಾರ ನೀಡಲಾಗಿದೆ. ಮೂರು ವ್ಯಕ್ತಿಗಳ ಮೇಲೆ ದಾಳಿ ನಡೆದಿದ್ದು, ₹1.18 ಲಕ್ಷ ಪರಿಹಾರ ವಿತರಿಸಲಾಗಿದೆ. ಈ ವರ್ಷ ಒಬ್ಬ ವ್ಯಕ್ತಿ ಮೇಲೆ ದಾಳಿ ಮಾಡಿದ್ದು, ₹60 ಸಾವಿರ ಪರಿಹಾರ ನೀಡಲಾಗಿದೆ.
ವಿಪತ್ತು ನಿರ್ವಹಣಾ ಕೋಶದಿಂದ ₹70.53 ಲಕ್ಷ ವೆಚ್ಚದಲ್ಲಿ ತುಕ್ಕು ಹಿಡಿಯದ ಸ್ಟೀಲ್ ಬಳಸಿ 4 ಕಿ.ಮೀ ರಿಂದ 5 ಕಿ.ಮೀ. ವರೆಗೆ ಬೇಲಿ ಹಾಕಲಾಗುತ್ತದೆ. ನದಿ ತೀರದಿಂದ 10 ರಿಂದ 15 ಅಡಿ ದೂರದಲ್ಲಿ ನಿರ್ಮಿಸಲಾಗುತ್ತದೆ. ಆಗ ಜನರು ಮೊಸಳೆಗಳ ಭಯವಿಲ್ಲದೇ ಕೃಷಿ ಚಟುವಟಿಕೆಗೆ ನೀರು ಬಳಸಿಕೊಳ್ಳಲು, ಕೂಡಲಸಂಗಮದಂತಹ ಕ್ಷೇತ್ರದಲ್ಲಿ ಸ್ನಾನ ಮಾಡಲು ಸಾಧ್ಯವಾಗಲಿದೆ.
‘ಮೊದಲ ಹಂತದಲ್ಲಿ ಐದು ಕಡೆ ಬೇಲಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ನಡೆಯಲಿದೆ. ಅಗತ್ಯವಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಬೇಲಿ ನಿರ್ಮಿಸಲಾಗುವುದು’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ. ತಿಳಿಸಿದರು.
<p class="quote">ಪರಿಸರ ಸಮತೋಲನಕ್ಕೆ ಮೊಸಳೆಗಳು ಅವಶ್ಯ. ತಂತಿ ಬೇಲಿ ನಿರ್ಮಾಣದ ಮೂಲಕ ಮೊಸಳೆ, ಮನುಷ್ಯ ಇಬ್ಬರ ರಕ್ಷಣೆ ಆಗುತ್ತದೆ</p> <p class="quote">ರುಥ್ರೇನ್,<span class="Designate"> ಪಿ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟೆ</span></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.