ADVERTISEMENT

ಸಂಕುಚಿತ ಮನೋಭಾವವೇ ನಿಜವಾದ ವೈಕಲ್ಯ: ಪಿ.ಎಚ್.ಪೂಜಾರ

ವಿಶ್ವ ವಿಕಲಚೇತನರ ದಿನ, ವಿವಿಧ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:09 IST
Last Updated 4 ಡಿಸೆಂಬರ್ 2025, 4:09 IST
ಬಾಗಲಕೋಟೆಯ ಕಲಾ ಭವನದಲ್ಲಿ ಬುಧವಾರ ನಡೆದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮದಲ್ಲಿ ಸಾಧಕರನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸನ್ಮಾನಿಸಿದರು
ಬಾಗಲಕೋಟೆಯ ಕಲಾ ಭವನದಲ್ಲಿ ಬುಧವಾರ ನಡೆದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮದಲ್ಲಿ ಸಾಧಕರನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸನ್ಮಾನಿಸಿದರು   

ಬಾಗಲಕೋಟೆ: ಅಂಗವಿಕಲ ಎಂಬುದು ಶಾಪವೂ ಅಲ್ಲ, ಪಾಪದ ಫಲವೂ ಅಲ್ಲ. ದೈಹಿಕ ನ್ಯೂನತೆಗಿಂತ, ಮನುಷ್ಯನಲ್ಲಿರುವ ಅಮಾನವೀಯ ಹಾಗೂ ಸಂಕುಚಿತ ಮನೋಭಾವವೇ ನಿಜವಾದ ವೈಚಾರಿಕ ಅಂಗವೈಕಲ್ಯವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.

ನವನಗರದ ಕಲಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವೈಕಲ್ಯವು ಹುಟ್ಟಿನಿಂದ, ವೈಜ್ಞಾನಿಕ ಕಾರಣಗಳಿಂದ ಅಥವಾ ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳಿಂದ ಸಂಭವಿಸಿರುತ್ತದೆ. ಆದರೆ, ಸಮಾಜ ಇದನ್ನು ಶಾಪದ ದೃಷ್ಟಿಯಲ್ಲಿ ನೋಡುವುದು ಅಥವಾ ಕೀಳಾಗಿ ಕಾಣುವುದು ಸರಿಯಲ್ಲ. ಅಂತಹ ಆಲೋಚನೆಯೇ ಒಂದು ಪಾಪದ ಕೆಲಸವಾಗಿದೆ. ಸೃಷ್ಟಿಯಲ್ಲಿ ಪಕ್ಷಿ, ಪ್ರಾಣಿಗಳಂತೆ ಮನುಷ್ಯನೂ ಒಂದು ಜೀವಿಯಾಗಿದ್ದು, ಮನುಷ್ಯನಿಗೆ ಮಾತ್ರ ವಿಶೇಷವಾದ ವಿಚಾರ ಶಕ್ತಿ ಮತ್ತು ವಿವೇಚನೆ ಇದೆ. ಅಂಗವಿಕಲರನ್ನು ಅಂತಃಕರಣದ ದೃಷ್ಟಿ ಹಾಗೂ ಸಮಾನತೆಯಿಂದ ನೋಡಬೇಕು ಎಂದರು.

ADVERTISEMENT

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಅಂಗವಿಕಲರಿಗೆ ಕೇವಲ ಅನುಕಂಪ ತೋರಿದರೆ ಸಾಲದು, ಅವರಿಗೆ ಶಿಕ್ಷಣ, ಉದ್ಯೋಗ ಮತ್ತು ಗೌರವಯುತ ಜೀವನ ಒದಗಿಸುವುದು ಸಮಾಜದ ನೈತಿಕ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಹಾಯಧನ, ಉದ್ಯೋಗ ತರಬೇತಿ, ಪುನರ್ವಸತಿ ಹಾಗೂ ಮನೋವೈದ್ಯಕೀಯ ಬೆಂಬಲ ಬಲಪಡಿಸಲು ಕ್ರಮಕೈಗೊಂಡಿದೆ. ಸರ್ಕಾರಿ ಕಚೇರಿಗಳು, ಶಾಲೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಸುಲಭ ಪ್ರವೇಶ ವಾತಾವರಣ ನಿರ್ಮಿಸುವುದು ಆದ್ಯತೆಯಾಗಿದೆ ಎಂದು ತಿಳಿಸಿದರು.

ವಿಶ್ವ ವಿಕಲಚೇತನರ ದಿನ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಚೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲರು ಹಾಗೂ ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರಭಾಕರ ಕೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ, ರಾಜು ತೇರದಾಳ, ಪರಶುರಾಮ ತೆಗ್ಗಿ ಉಪಸ್ಥಿತರಿದ್ದರು.

ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ

ಬಾಗಲಕೋಟೆ: ಜಿಲ್ಲಾಡಳಿತ ಭವನದ ಆವರಣದಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು. ನಗರದ ವಿವಿಧೆಡೆ ಸಂಚರಿಸಿ ನವನಗರದ ಕಲಾಭವನದಲ್ಲಿ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.