
ಬಾಗಲಕೋಟೆ: ಸತತ ಎರಡು ವರ್ಷಗಳಿಂದ ಬೆಲೆ ಸಿಗದೇ ಕಂಗಾಲಾಗಿದ್ದ ಒಣ ಮೆಣಸಿನಕಾಯಿ ಬೆಳೆಗಾರರು ಒಳ್ಳೆಯ ಬೆಲೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಉತ್ತಮ ಬೆಲೆ ಏನೋ ದೊರೆಯುತ್ತಿದೆ. ಆದರೆ, ರೈತರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಸಲಿಲ್ಲ. ಎರಡು ವರ್ಷಗಳಿಂದ ಬೆಲೆ ಸಿಗದ ಕಾರಣ ಒಂದೆಡೆ ಬೆಳೆದಿರುವ ಪ್ರದೇಶ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಹೆಚ್ಚು ಮಳೆಯಾಗಿ ಇಳುವರಿಯೂ ಕಡಿಮೆಯಾಗಿದೆ.
2022ರಲ್ಲಿ ಉತ್ತಮ ಬೆಲೆ ದೊರೆತಿದ್ದರಿಂದ 2023ರಲ್ಲಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ 29,255 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದರು. ಜಿಲ್ಲೆಯಲ್ಲಿ ಈ ಹಿಂದೆ 5 ಸಾವಿರ ಹೆಕ್ಟೇರ್ ಪ್ರದೇಶ ದಾಟಿರಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದರಿಂದ ಉತ್ತಮ ಬೆಲೆ ಸಿಗದೇ ನಷ್ಟ ಹೊಂದಿದ್ದರು. ಇದರಿಂದ 2024ರಲ್ಲಿ 7,166 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದರು. ಆಗಲೂ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಈ ಬಾರಿ ಕೇವಲ 4,639 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದಾರೆ. ಈಗ ಉತ್ತಮ ಬೆಲೆ ದೊರೆಯುತ್ತಿದೆ. ಲಾಭ ಪಡೆಯಲು ಮೆಣಸಿನಕಾಯಿ ಇಲ್ಲ.
ಬ್ಯಾಡಗಿ ಕಡ್ಡಿ ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹12,500 ರಿಂದ ₹15 ಸಾವಿರವರೆಗೆ ಬೆಲೆ ದೊರೆತಿತ್ತು. ಈ ವರ್ಷ ಪ್ರತಿ ಕ್ವಿಂಟಲ್‌ಗೆ ₹35 ಸಾವಿರದಿಂದ ₹45 ಸಾವಿರ ದೊರೆಯುತ್ತಿದೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಕಳೆದ ವರ್ಷ ₹15,500 ರಿಂದ ₹25 ಸಾವಿರವರೆಗೆ ದೊರೆತಿತ್ತು. ಈ ಬಾರಿ ₹35 ಸಾವಿರದಿಂದ ₹52 ಸಾವಿರ ದೊರೆಯುತ್ತಿದೆ.
ಕಳೆದ ವರ್ಷ ಬೆಲೆ ಸಿಗಲಿಲ್ಲ ಎಂದು ಹಲವಾರು ರೈತರು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸ್ಟಾಕ್ ಮಾಡಿದ್ದರು. ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಅದನ್ನೂ ಮಾರಾಟ ಮಾಡಲಾಗುತ್ತಿದೆ.
ಮೂರು ವರ್ಷಗಳ ಹಿಂದೆ ಒಣ ಮೆಣಸಿನಕಾಯಿಗೆ ಬಂಪರ್ ಬೆಲೆ ಸಿಕ್ಕಿತ್ತು. ಎರಡು ವರ್ಷಗಳಿಂದ ಉತ್ತಮ ಬೆಲೆ ಸಿಗದ್ದರಿಂದ ಮೆಣಸಿನಕಾಯಿ ಬೆಳೆಯಲು ಹಿಂದೇಟು ಹಾಕಿದ್ದರು. ಈ ವರ್ಷ ಉತ್ತಮ ಬೆಲೆ ದೊರೆಯುತ್ತಿದೆ. ಈರುಳ್ಳಿಯಲ್ಲಿ ಬಹಳ ನಷ್ಟ ಆಗಿತ್ತು. ಮೆಣಸಿನಕಾಯಿ ಸ್ವಲ್ಪ ಲಾಭ ತಂದಿರುವುದು ನೆಮ್ಮದಿ ತರಲಿದೆ ಎಂದು ಬೆನಕಟ್ಟಿ ರೈತ ಗಿರೀಶ ಉಗಲವಾಟ ಹೇಳಿದರು.
ಈ ಹಿಂದೆ ಉತ್ತಮ ಬೆಲೆ ದೊರೆಯದ್ದರಿಂದ ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಬೆಳೆಯುವ ಪ್ರದೇಶ ಕಡಿಮೆಯಾಗಿದೆ.–ರವೀಂದ್ರ ಹಕಾಟಿ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.