
ಬಾಗಲಕೋಟೆ: ‘ವಿಕಸಿತ ಭಾರತದ ಕಲ್ಪನೆಯಿಟ್ಟುಕೊಂಡು ನರೇಂದ್ರ ಮೋದಿ ಕೈಗೊಳ್ಳುತ್ತಿರುವ ಯೋಜನೆ, ಕಾರ್ಯಕ್ರಮಗಳ ತಿರುಳು ಅರಿಯದ ಕಾಂಗ್ರೆಸ್ ಪಕ್ಷ ಬರೀ ಟೀಕೆ, ವಿರೋಧ ಮಾಡುವುದನ್ನು ರೂಢಿ ಮಾಡಿಕೊಂಡಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಶನಿವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರಿಗೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಬದಲಾವಣೆ ತಂದಿದೆ. ಅದನ್ನು ಸರಿಯಾಗಿ ತಿಳಿಯದೇ ಹಾಗೂ ಆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಮುಂದಾಗದೇ ವಿರೋಧಿಸುವುದು, ಸದನ ಬಹಿಷ್ಕರಿಸುವುದು ಹಾಗೂ ಟೀಕೆ ಮಾಡುತ್ತ ಅಪಪ್ರಚಾರಕ್ಕೆ ಇಳಿದಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಯಲ್ಲಿ ಮುನ್ನಡೆಯುತ್ತಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ’ ಎಂದು ದೂರಿದರು.
‘ಮೋದಿ ವಿಕಸಿತ ಭಾರತದ ಕನಸು ಕಂಡಿದ್ದು, ಆ ನಿಟ್ಟಿನಲ್ಲಿ ಹಲವಾರು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ದೇಶ ಆರ್ಥಿಕ ಪ್ರಗತಿ ಸಾಧಿಸುತ್ತಿದೆ, ಆರ್ಥಿಕತೆಯಲ್ಲಿ ಭಾರತ ಈಗ 4 ನೇ ಸ್ಥಾನಕ್ಕೆ ಬಂದಿದೆ. ಅದಕ್ಕೆ ಪೂರಕವಾಗಿ ಹಲವಾರು ಬದಲಾವಣೆಗಳಾಗಿವೆ. ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ, ಲೋಪದೋಷಗಳನ್ನು ಸರಿಪಡಿಸಿ ನಿಜವಾದ ಕೂಲಿಕಾರರಿಗೆ ಯೋಜನೆಯ ಅನುಕೂಲತೆಗಳು ತಲುಪಬೇಕು ಎಂಬ ಉದ್ದೇಶದಿಂದ ಬದಲಾವಣೆ ತರಲಾಗಿದೆ’ ಎಂದರು.
ನರೇಗಾ ಯೋಜನೆಯ ಬಜೆಟ್ ಹೆಚ್ಚಿಸಲಾಗಿದೆ. 100 ದಿನಗಳ ಕೆಲಸದ ದಿನಗಳನ್ನು 120 ಕ್ಕೆ ಹೆಚ್ಚಿಸಲಾಗಿದೆ. ನಕಲಿ ಜಾಬ್ ಕಾರ್ಡ್‌ಗಳನ್ನು ರದ್ದುಪಡಿಸಿ, ಕೆಲಸ ಮಾಡಿದವರಿಗೆ 7 ದಿನದೊಳಗೆ ಹಣ ಪಾವತಿಸುವ ಕ್ರಮವಹಿಸಲಾಗಿದೆ. ತಮ್ಮ ಆಡಳಿತದಲ್ಲಿ ಅನೇಕ ಯೋಜನೆ, ಕಾರ್ಯಕ್ರಮಗಳಿಗೆ ಬರೀ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರು ಇಟ್ಟಿರುವ ಕಾಂಗ್ರೆಸ್ಸಿನವರಿಗೆ ಮಹಾತ್ಮಗಾಂಧಿ ಈಗ ನೆನಪಾದರೆ ಎಂದು ಪ್ರಶ್ನಿಸಿದರು.
ಪ್ರಗತಿ ಕಾರ್ಯಕ್ರಮಗಳ ಕುರಿತು ಟೀಕೆ, ಟಿಪ್ಪಣಿ ಮಾಡುವ ರಾಹುಲ್ ಗಾಂಧಿ ಮುಸ್ಲಿಮರಿಗೆ ಅನ್ಯಾಯವಾದರೆ ಪ್ರತಿಭಟನೆ, ಹೋರಾಟ ಎನ್ನುತ್ತಾರೆ. ಆದರೆ ಬಾಂಗ್ಲಾ ದೇಶದಲ್ಲಿ ನಡೆದಿರುವ ಹಿಂದೂಗಳ ಹತ್ಯೆಯ ಬಗ್ಗೆ ಚಕಾರ ಎತ್ತುತ್ತಿಲ್ಲ, ತುಷ್ಟಿಕರಣ ನೀತಿಯನ್ನೇ ಮುಂದುವರಿಸಿಕೊಂಡು ಹೊರಟಿದ್ದಾರೆ’ ಎಂದು ಟೀಕಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.