
ಬಾಗಲಕೋಟೆ: ‘ಮಹದಾಯಿ, ಮೇಕೆದಾಟು ಯೋಜನೆಗಳು ಏನಾಗಿವೆ. ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿಯೂ ಅನ್ಯಾಯವಾಗುತ್ತಿದೆ. ಈ ಬಗ್ಗೆ ಮಾತನಾಡುವ ಧೈರ್ಯವನ್ನು ರಾಜ್ಯದ ಸಂಸದರು, ರಾಜ್ಯದಿಂದ ಕೇಂದ್ರ ಸಚಿವರು ತೋರಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸವಾಲು ಹಾಕಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಇದನ್ನು ಕೇಳುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಚುನಾವಣೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಗ್ಯಾರಂಟಿಗಳ ಬಗ್ಗೆ ಉಡಾಫೆ ಮಾಡನಾಡುವ ಬಿಜೆಪಿ ನಾಯಕರು, ಅವುಗಳನ್ನು ನಿಲ್ಲಿಸಲಿ ಎಂಬ ಎದೆಗಾರಿಕೆ ತೋರಿಸಲಿ’ ಎಂದರು.
‘ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಕೇಂದ್ರ ವಿಫಲವಾಗಿದೆ. ರೈತರ ಆದಾಯ ದ್ವಿಗುಣವಾಗಿಲ್ಲ. ಸಿಲಿಂಡರ್, ಪೆಟ್ರೋಲ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅವರಿಗೆ ನಮ್ಮ ಸರ್ಕಾರ ಟೀಕಿಸುವ ನೈತಿಕತೆ ಇಲ್ಲ’ ಎಂದು ಟೀಕಿಸಿದರು.
20 ವರ್ಷಗಳ ಹಿಂದೆ ಮನರೇಗಾ ಜಾರಿ ಮಾಡಲಾಯಿತು. ಅದರಲ್ಲಿನ ಮಹಾತ್ಮ ಗಾಂಧಿ ಹೆಸರು ತೆಗೆಯುವ ಮೂಲಕ ಅವರ ತತ್ವಗಳ ವಿರುದ್ಧ ಸರ್ಕಾರ ನಡೆದುಕೊಳ್ಳುತ್ತಿದೆ. ನಾಥುರಾಮ್ ಗೋಡ್ಸೆ ಗಾಂಧೀಜಿ ಅವರನ್ನು ಕೊಂದರೆ, ಬಿಜೆಪಿ ಅವರ ಸಿದ್ಧಾಂತಗಳ ಕೊಲೆ ಮಾಡಿದೆ ಎಂದು ಆರೋಪಿಸಿದರು.
ಮನರೇಗಾ ಬಚಾವೋ ಸಂಗ್ರಾಮ ಹೆಸರಿನಲ್ಲಿ ಹೋರಾಟ ಮಾಡಲಾಗುತ್ತಿದೆ. ಜನ ಕೇಂದ್ರಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಬಳ್ಳಾರಿಯಲ್ಲಿ ನಡೆದ ಗಲಾಟೆ ಘಟನೆಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಯಾರಿಗೂ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ. ಜನಾರ್ಧನ ರಡ್ಡಿ ಅವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ತನಿಖೆ ನಡೆದಿದೆ. ವರದಿ ಬಂದ ಮೇಲೆ ಕ್ರಮ ಆಗಲಿದೆ ಎಂದು ಹೇಳಿದರು.
ಸಚಿವ ಸಂಪುಟ ಪುನರ್‌ರಚನೆ ಚರ್ಚೆ ಬಾಗಲಕೋಟೆ: ಜ.31ರ ನಂತರ ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಲೀಂ ಅಹ್ಮದ್ ಹೇಳಿದರು. ಈಗ ಸಂಪುಟದಲ್ಲಿರುವ ಶೇ50ರಷ್ಟುನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂದಿದೆ. ಈ ಬಗ್ಗೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.