ADVERTISEMENT

ಬಾದಾಮಿ | ಜಿಲ್ಲೆಯ ದೊಡ್ಡ ಕೆರೆಯಲ್ಲಿ ಬೆಳೆದ ಜಾಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:59 IST
Last Updated 21 ಜನವರಿ 2026, 5:59 IST
ಬಾದಾಮಿ ಸಮೀಪದ ಕೆಂದೂರ ಗ್ರಾಮದ ಕೆರೆಯಲ್ಲಿ ಸಮೃದ್ಧವಾಗಿ ಆಳೆತ್ತರಕ್ಕೆ ಬೆಳೆದ ಜಾಲಿಗಿಡಗಳು
ಬಾದಾಮಿ ಸಮೀಪದ ಕೆಂದೂರ ಗ್ರಾಮದ ಕೆರೆಯಲ್ಲಿ ಸಮೃದ್ಧವಾಗಿ ಆಳೆತ್ತರಕ್ಕೆ ಬೆಳೆದ ಜಾಲಿಗಿಡಗಳು   

ಬಾದಾಮಿ: ತಾಲ್ಲೂಕಿನ ಕೆಂದೂರ ಕೆರೆಯು ಜಿಲ್ಲೆಯಲ್ಲಿಯೇ ದೊಡ್ಡ ಕೆರೆ. ಆದರೆ ಈಗ ಇದು ಸಮೃದ್ಧವಾಗಿ ಆಳೆತ್ತರಕ್ಕೆ ಬೆಳೆದ ಜಾಲಿಗಿಡಗಳಿಂದ ಆವರಿಸಿದೆ.

ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಿಂದಲೂ ಅಂದಾಜು ಮೂರು ದಶಕಗಳಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿಗಳು ನಡೆದಿವೆ.

ಹೂಳೆತ್ತಲು, ಗಿಡಗಂಟಿ ತೆಗೆಯಲು ಅಂದಾಜು ₹1 ಕೋಟಿ, ಮಲಪ್ರಭಾ ನದಿಯಿಂದ ಕೆರೆಗೆ ನೀರು ಭರ್ತಿ ಮಾಡಲು 2017–18ರಲ್ಲಿ ₹5 ಕೋಟಿ ವೆಚ್ಚಮಾಡಿದೆ. ಒಂದು ಬಾರಿ ನೀರು ಬಂದಿತಾದರೂ, ಮೂರು ವರ್ಷಗಳಿಂದ ನೀರು ಹರಿದಿಲ್ಲ ಎಂದು ಗ್ರಾಮದ ರೈತರು ಹೇಳಿದರು.

ADVERTISEMENT

‘ತಾಲ್ಲೂಕಿನ 20ಕ್ಕೂ ಅಧಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಮೂರು ವರ್ಷಗಳಿಂದ ಅಂದಾಜು ನೂರು ಕೋಟಿಗೂ ಅಧಿಕ ವೆಚ್ಚದ ಎನ್.ಆರ್.ಜಿ. ಕಾಮಗಾರಿ ಕೈಗೊಂಡಿದೆ. ಆದರೂ ಹೂಳು ಹೊರಗೆ ಹೋಗಲಿಲ್ಲ. ಕೆರೆಗೆ ಹನಿ ನೀರು ಬಂದಿಲ್ಲ. ಸರ್ಕಾರಕ್ಕೆ ದಶಕದಿಂದ ಅನೇಕ ಮನವಿಗಳನ್ನು ಕಳಿಸಿದರೂ ಯಾರು ಗಮನಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೇಮಂತ ಲಮಾಣಿ ಬೇಸರ ವ್ಯಕ್ತಪಡಿಸಿದರು.

64 ಚ.ಕಿ.ಮೀ. ಜಲಾನಯನ ಪ್ರದೇಶ ಕೆರೆಗಿದ್ದು, 65 ದಶಲಕ್ಷ ಘನ ಅಡಿ ನೀರು ಸಂಗ್ರಹವಾಗುತ್ತದೆ. ಕೆರೆಗೆ ನೀರು ಭರ್ತಿಯಾದರೆ 182 ಹೇಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯವಾಗಲಿದೆ. ಎಡದಂಡೆ, ಬಲದಂಡೆ ಕಾಲುವೆಗಳು ಮುಚ್ಚಿವೆ. ಸುತ್ತಲಿನ 10 ಗ್ರಾಮಗಳ ಜನರಿಗೆ, ರೈತರಿಗೆ ಉಪಯೋಗವಾಗಬೇಕಿದ್ದ ಕೆರೆ ಜಾಲಿ ಗಿಡಗಳಲ್ಲಿ ಮರೆಯಾಗಿದೆ.

‘ಬಾದಾಮಿಯಿಂದ ಪಟ್ಟದಕಲ್ಲು, ಐಹೊಳೆ, ಮಹಾಕೂಟ ಸ್ಮಾರಕಗಳಿಗೆ ಸಂಚರಿಸುವ ರಸ್ತೆಯಲ್ಲಿ ಕೆಂದೂರ ಕೆರೆ ಇರುವುದರಿಂದ ಕೆರೆಯಲ್ಲಿ ನೀರು ನಿಲ್ಲಿಸಿ ಗಿಡಗಳನ್ನು ಬೆಳೆಸಿ ಪಕ್ಷಿದಾಮ ಮಾಡಬೇಕು. ಪರಿಸರ ಪ್ರವಾಸಿ ತಾಣ ಮಾಡಿದರೆ ಅನೇಕ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ಒಟ್ಟು 64 ಕೆರೆಗಳ ಪೈಕಿ ಸೂಳಿಕೇರಿ, ಕಲಬಂದಕೇರಿ, ತಪ್ಪಸಕಟ್ಟಿ, ಗಂಗನಬೂದಿಹಾಳ, ಹೂಲಗೇರಿ, ಚಿಮ್ಮನಕಟ್ಟಿ, ಹಲಕುರ್ಕಿ, ಕಗಲಗೊಂಬ, ನೀರಲಕೇರಿ, ಹೊಸಕೋಟೆ, ಕಬ್ಬಲಗೇರಿ, ಖ್ಯಾಡ, ಉಗಲವಾಟ ಮತ್ತು ಯರಗೊಪ್ಪ ಎಸ್.ಬಿ. ಗ್ರಾಮಗಳ ಒಟ್ಟು 14 ಕೆರೆಗಳು ಒತ್ತುವರಿಯಾಗಿವೆ ಎಂದು ಕಂದಾಯ ಇಲಾಖೆಯಿಂದ ತಿಳಿದಿದೆ.