ADVERTISEMENT

ಕೂಡಲಸಂಗಮ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ಶ್ರೀಧರ ಗೌಡರ
Published 12 ಡಿಸೆಂಬರ್ 2025, 5:11 IST
Last Updated 12 ಡಿಸೆಂಬರ್ 2025, 5:11 IST
ಕೂಡಲಸಂಗಮ ಕ್ರಾಸ್‌ನಿಂದ ಕೂಡಲಸಂಗಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯ ತಗ್ಗು ಗುಂಡಿಗಳು
ಕೂಡಲಸಂಗಮ ಕ್ರಾಸ್‌ನಿಂದ ಕೂಡಲಸಂಗಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯ ತಗ್ಗು ಗುಂಡಿಗಳು   

ಕೂಡಲಸಂಗಮ: ರಾಷ್ಟ್ರೀಯ ಹೆದ್ದಾರಿ 50ರ ಕೂಡಲಸಂಗಮ ಕ್ರಾಸ್‌ನಿಂದ ಕೂಡಲಸಂಗಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಲವು ಕಡೆ ಗುಂಡಿಗಳು ಬಿದ್ದಿದ್ದರೆ, ಕೆಲವು ಕಡೆ ರಸ್ತೆ ಕಿತ್ತು ಹೋಗಿದೆ. ನಿತ್ಯ ಸುಕ್ಷೇತ್ರದ ದರ್ಶನಕ್ಕೆ ಆಗಮಿಸುವ ಪ್ರವಾಸಿಗರು ಸಂಚರಿಸುವಾಗ ತೊಂದರೆ ಅನುಭವಿಸುತ್ತಿದ್ದಾರೆ.

7 ಕಿ.ಮೀ ದೂರದ ರಸ್ತೆ ದುರಸ್ತಿ ಕಾರ್ಯ ಮಾರ್ಚ್‌ ತಿಂಗಳಲ್ಲಿ ಆಗಿದ್ದರೂ, ಪ್ರಯೋಜನವಾಗಿಲ್ಲ. ಗುಂಡಿಗಳು ಅಧಿಕ ಇವೆ. ಕೆಲವು ಕಡೆ ರಸ್ತೆ ಕಿತ್ತೂ ಹೋಗಿದೆ,  ಕೆಲವು ಕಡೆ ರೈತರು ರಸ್ತೆಯನ್ನೇ ಅಗೆದು ಪೈಪಲೈನ್ ಹಾಕಿಕೊಂಡಿದ್ದಾರೆ. ದುರಸ್ತಿ ಮಾಡಬೇಕಾದ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ನಿತ್ಯ ಸಂಚಾರಕ್ಕೆ ಜನ ಪರದಾಡುತ್ತಿದ್ದಾರೆ.

ಸುಕ್ಷೇತ್ರದ ದರ್ಶನಕ್ಕೆ ಬರುವ ಪ್ರವಾಸಿಗರ, ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ, ಆದರೆ ರಸ್ತೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ರಸ್ತೆ ನಿರ್ಮಾಣ ಮಾಡುವ ಮೂಲಕ ಪ್ರವಾಸಿಗರಿಗೆ, ಸ್ಥಳೀಯರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. 7 ಕಿ.ಮೀ ರಸ್ತೆಯಲ್ಲಿ ಅಧಿಕ ಹಂಪ್‌ಗಳು ಇದ್ದು, ಅವೈಜ್ಞಾನಿಕವಾಗಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಅಪಘಾತಗಳಿಗೂ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಮಾರ್ಗ ಮಧ್ಯದ ಹೂವನೂರ, ವರಗೋಡದಿನ್ನಿ ಗ್ರಾಮಸ್ಥರು ರಸ್ತೆ ಬದಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರ ಜೊತೆಗೆ ತ್ಯಾಜ್ಯವಸ್ತುಗಳನ್ನು ಎಸೆಯುತ್ತಾರೆ, ಕೆಲವು ಕಡೆ ವಾಹನ ನಿಲ್ಲಿಸಿರುತ್ತಾರೆ, ಹಲವೆಡೆ ಮರಳು, ಕಲ್ಲು ಹಾಕಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಿಸಿದ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ವಚ್ಛ ಮಾಡಿಸಿ, ರಸ್ತೆ ಮೇಲಿನ ತ್ಯಾಜ್ಯವಸ್ತು, ಮರಳು, ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ವಿಜಯಪುರದ ಪ್ರವಾಸಿ ಮೌನೇಶ ಪತ್ತಾರ ಒತ್ತಾಯಿಸಿದ್ದಾರೆ.

ಕೂಡಲಸಂಗಮ ಕ್ರಾಸ್‌ನಿಂದ ಕೂಡಲಸಂಗಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತುಹೋಗಿದೆ.

ಮಾಹಿತಿ ಪಡೆಯಲು ಹುನಗುಂದ ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಐ.ಜಿ.ಹಿರೇಮಠ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು ಕರೆ ಸ್ವೀಕರಿಸಲಿಲ್ಲ.

ರಾಷ್ಟ್ರೀಯ ಹೆದ್ದಾರಿ 50ರ ಕೂಡಲಸಂಗಮ ಕ್ರಾಸ್‌ದಿಂದ ಕೂಡಲಸಂಗಮದ 7 ಕಿ.ಮೀ ದೂರದ ದ್ವಿಪಥ ರಸ್ತೆ ಕಿತ್ತುಹೊಗಿದ್ದು, ಕೆಲವು ಕಡೆ ಗುಂಡಿಗಳು ಬಿದ್ದಿವೆ, ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡಬೇಕು.
- ಕರಸಂಗಯ್ಯ ಗುಡಿ, ಕೂಡಲಸಂಗಮ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.