ADVERTISEMENT

ಪೊಲೀಸರು ಸ್ಥಳಕ್ಕೆ ಹೋದಾಗ ಚಿದಾನಂದ ಸವದಿ ಸ್ಥಳದಲ್ಲಿಯೇ ಇದ್ದರು: ಬಾಗಲಕೋಟೆ ಎಸ್ಪಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 10:32 IST
Last Updated 6 ಜುಲೈ 2021, 10:32 IST
ಚಿದಾನಂದ ಸವದಿ ಮತ್ತು ಅಪಘಾತಕ್ಕೀಡಾಗಿರುವ ಅವರು ಪ್ರಯಾಣಿಸುತ್ತಿದ್ದ ಕಾರು
ಚಿದಾನಂದ ಸವದಿ ಮತ್ತು ಅಪಘಾತಕ್ಕೀಡಾಗಿರುವ ಅವರು ಪ್ರಯಾಣಿಸುತ್ತಿದ್ದ ಕಾರು   

ಬಾಗಲಕೋಟೆ: ಅಪಘಾತವಾದ ತಕ್ಷಣ ಡಿಸಿಎಂ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸ್ಥಳದಿಂದ ಹೊರಟು ಹೋಗಿಲ್ಲ. ಬದಲಿಗೆ ಹುನಗುಂದ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಬೇರೊಂದು ವಾಹನದಲ್ಲಿ ಅಲ್ಲಿಂದ ತೆರಳಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಅನ್ವಯ ಚಾಲಕ ಹನುಮಂತ ಸಿಂಗ್ ರಜಪೂತ ಕಾರು ಚಲಾಯಿಸುತ್ತಿದ್ದರು ಎಂದರು.

ಪೊಲೀಸರು ಸ್ಥಳಕ್ಕೆ ತೆರಳಿದಾಗ ಚಿದಾನಂದ ಸವದಿ ಸ್ಥಳದಲ್ಲಿಯೇ ಇದ್ದರು. ಕಾರು ಚಾಲಕನನ್ನು ರಾತ್ರಿಯೇ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದ್ದು, ಪಾನಮತ್ತನಾಗಿರಲಿಲ್ಲ ಎಂದರು.

ADVERTISEMENT

ಚಿದಾನಂದ ಅವರೇ ಕಾರು ಚಲಾಯಿಸುತ್ತಿದ್ದರು ಎಂಬ ಕುಟುಂಬದವರ ಆರೋಪದ ಸತ್ಯಾಸತ್ಯತೆ, ತನಿಖೆಯ ನಂತರ ಗೊತ್ತಾಗಲಿದೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಚಿದಾನಂದ ಸವದಿ ಅವರನ್ನು ರಕ್ಷಿಸಲು ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಎಸ್ಪಿ ಪ್ರತಿಕ್ರಿಯಿಸಿದರು.

ಹುನಗುಂದ ತಾಲ್ಲೂಕಿನ ಕಳಸದ ಮಾರ್ಗ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ರಾತ್ರಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಇದ್ದ ಕಾರು ಡಿಕ್ಕಿ ಹೊಡೆದು ರೈತರೊಬ್ಬರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಬಾಗಲಕೋಟೆ ತಾಲ್ಲೂಕು ಚಿಕ್ಕ ಹಂಡರಗಲ್‌ ಗ್ರಾಮದ ನಿವಾಸಿ ಕೂಡ್ಲೆಪ್ಪ ಹನುಮಪ್ಪ ಬೋಳಿ (55) ಸಾವಿಗೀಡಾಗಿದ್ದಾರೆ. ಹೊಲಕ್ಕೆ ತೆರಳಿದ್ದ ಅವರು ವಾಪಸ್‌ ಬೈಕ್‌ನಲ್ಲಿ ಮನೆಗೆ ಮರಳುವಾಗ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.