ADVERTISEMENT

ಅಡೆತಡೆ ಬಂದಷ್ಟು ಗಟ್ಟಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:37 IST
Last Updated 11 ಸೆಪ್ಟೆಂಬರ್ 2025, 4:37 IST
ಬಾಗಲಕೋಟೆಯಲ್ಲಿ ಬುಧವಾರ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಭಕ್ತರು
ಬಾಗಲಕೋಟೆಯಲ್ಲಿ ಬುಧವಾರ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಬಾಗಲಕೋಟೆ: ಲಿಂಗಾಯತ ಚಳವಳಿಯನ್ನು ಜೀವಂತವಾಗಿ ಇಟ್ಟುಕೊಂಡು ಹೋಗಿದ್ದರೆ, ಮುಂದಿಟ್ಟ ಹೆಜ್ಜೆ ಹಿಂದಡದೇ ಮುಂದುವರೆದಿದ್ದರೆ ಬಸವಣ್ಣ ರಾಜ್ಯಕ್ಕೆ ಸಾಂಸ್ಕೃತಿಕ ನಾಯಕನಷ್ಟೇ ಅಲ್ಲ, ಭಾರತಕ್ಕೇ ಕಾಯಕ ತತ್ವ ನಾಯಕ ಆಗುತ್ತಿದ್ದರು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವತಿಯಿಂದ ಬುಧವಾರ ಬಾಗಲಕೋಟೆಯ ಕಲಾಭವನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಜನ ಕಟ್ಟುವ ಕೆಲಸ ಮಾಡೋಣ. ಅವರು ಮಾತ್ರ ಇತಿಹಾಸದಲ್ಲಿ ಉಳಿದುಕೊಂಡಿದ್ದಾರೆ. ಅಡೆತಡೆ ಬಂದಷ್ಟೂ ಗಟ್ಟಿಯಾಗುತ್ತೇವೆ ಎಂದರು.

ಕಾಯಕ ಧರ್ಮಕ್ಕೆ ದೊಡ್ಡ ಇತಿಹಾಸವಿದೆ. ಎಲ್ಲ ಕಾಯಕಜೀವಿಗಳ ಸಂಸ್ಕೃತಿ ಬಸವ ಸಂಸ್ಕೃತಿಯಾಗಿದೆ. ಧರ್ಮ, ಜಾತಿ ಕಾಲಂನಲ್ಲಿ ಏನು ಬರೆಸಬೇಕು ಎಂಬುದುನ್ನು ಎಲ್ಲ ಪೂಜರು ಹೇಳಿದ್ದಾರೆ. ನಮ್ಮ ಸಮಾಜದ ಹೆಸರಲ್ಲೇ ಲಿಂಗಾಯತ ಎಂದು ಬಂದಿದೆ. ಅದರ ಬಗ್ಗೆ ಸ್ಪಷ್ಟತೆ ಇದೆ. ಲಿಂಗಾಯತ ಪರಂಪರೆ ಉಳಿಸೋಣ ಎಂದು ಹೇಳಿದರು.

ADVERTISEMENT

ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಒಂದು ಸಂಸ್ಕೃತಿ ದೇಶವನ್ನು ನಾಶವೂ ಮಾಡಬಹುದು. ವಿಕಾಸವೂ ಮಾಡಬಹುದು. ಬ್ರಿಟಿಷರ ಮೂಲ ಉದ್ದೇಶ ನೆಲಮೂಲದ ಸಂಸ್ಕೃತಿ ನಾಶ ಮಾಡಿದರೆ, ಜಗತ್ತು ಆಳಬಹುದು ಎನ್ನುವುದು ಅವರ ಗುರಿಯಾಗಿತ್ತು. ವಿಜ್ಞಾನ, ವೈಜ್ಞಾನಿಕ ಸಂಸ್ಕೃತಿಯನ್ನು ಬಸವಣ್ಣ ನೀಡಿದ್ದಾರೆ. ಸಮತಾವಾದವನ್ನು ಜಗತ್ತಿಗೆ ನೀಡಿದ್ದಾರೆ.

ನಮ್ಮ ಸ್ವಾಮೀಜಿಗಳು ಪಾಠ ಮಾಡುತ್ತಿಲ್ಲ. ಹೇಳುವುದು ಬಸವ ಸಂಸ್ಕೃತಿಯಲ್ಲ, ಅಳವಡಿಸಿಕೊಳ್ಳುವುದು ಸಂಸ್ಕೃತಿ ಎಂದು ತೋರಿಸುತ್ತಿದ್ದಾರೆ. ಬದುಕು ಕಲಿಸಿಕೊಟ್ಟದ್ದು ಬಸವ ಧರ್ಮ ಎಂದರು.

ವಿಜಯಪುರದ ಬಸವಕುಮಾರ ಸ್ವಾಮೀಜಿ ಮಾತನಾಡಿ, ತಾಂತ್ರಿಕವಾಗಿ ಕೆಲವು ಸಮಾಜಗಳು ನಮ್ಮನ್ನು ಬಿಟ್ಟಿರಬಹುದು. ಆದರೆ, ತಾತ್ವಿಕವಾಗಿ ಬಿಟ್ಟಿಲ್ಲ. ಬಸವ ಸಂಸ್ಕೃತಿ ನುಡಿ ಸಂಸ್ಕೃತಿಯಲ್ಲ, ಅಳವಡಿಕೆ ಸಂಸ್ಕೃತಿ ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಶಾಂತ ನಾಯಕ ‘ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂಬ ವಿಷಯ ಕುರಿತು ಮಾತನಾಡಿ, ಸ್ಥಾವರಕ್ಕೆಳಿವುಟು, ಜಂಗಮಕ್ಕೆಳಿವಿಲ್ಲ ಎಂದು ಬಸವಣ್ಣ ಹೇಳಿದ್ದರು. ಅದು ಇವತ್ತು ಸಾಕ್ಷಾತ್ಕಾರವಾಗಿದೆ. ನಾಡಿಗೆ ಅಕ್ಕ, ಅಣ್ಣ ಎಂಬುದನ್ನು ನೀಡಿದ್ದೇ ಅವರು. ಯಾವ ಕುಲ ಎಂದು ಕೇಳಿದರೆ, ಬಸವ ಕುಲ ಎಂದು ಹೇಳಬೇಕು ಎಂದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಬಸವಧರ್ಮ ಪೀಠದ ಗಂಗಾ ಮಾತಾಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ, ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ, ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ,  ಗುಳೇದಗುಡ್ಡದ ಗುರುಸಿದ್ದೇಶ್ವರ ಸ್ವಾಮೀಜಿ, ಹೊಸದುರ್ಗದ ಪುರುಷೋತ್ತಮಾನಂದ ಸ್ವಾಮೀಜಿ, ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.