ADVERTISEMENT

ವೀರಶೈವ, ಲಿಂಗಾಯತ’ ಒಂದೇ: ಸ್ವಾಮೀಜಿ

ಇಲ್ಲ, ‘ಎರಡೂ ಬೇರೆ’ ಪ್ರತಿವಾದ , ಚರ್ಚೆಗೆ ವೇದಿಕೆಯಾದ ಮೊಯಿಲಿ ಅವರ ಕೃತಿ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 20:55 IST
Last Updated 3 ಆಗಸ್ಟ್ 2025, 20:55 IST
   

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿ ಮಹಾಯಾನ ಸಂಪುಟ–3’ ಕೃತಿ ಬಿಡುಗಡೆ ಸಮಾರಂಭವು ಭಾನುವಾರ ಇಲ್ಲಿ 'ವೀರಶೈವ ಮತ್ತು ಲಿಂಗಾಯತ' ಬೇರೆ, ಬೇರೆ’ ಎಂಬ ವಿಷಯದ ಚರ್ಚೆಗೆ ವೇದಿಕೆಯಾಯಿತು.

ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.‌‌ವೀರಣ್ಣ ರಾಜೂರ, ಸಾಹಿತಿ ಸರಜೂ ಕಾಟ್ಕರ್‌, ‘ವೀರಶೈವ, ಲಿಂಗಾಯತ ಒಂದೇ ಎಂಬರ್ಥದಲ್ಲಿ ಪುಸ್ತಕದಲ್ಲಿ ಬರೆಯಲಾಗಿದೆ. ಆದರೆ ಇವೆರಡೂ ಬೇರೆ, ಬೇರೆ. ಮುಂದಿನ ಸಂಪುಟದಲ್ಲಿ ಇದನ್ನು ಸ್ಪಷ್ಟಪಡಿಸಬೇಕು’ ಎಂದರು.

ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌.ಆರ್‌.ಪಾಟೀಲ ಸಮೂಹ ಸಂಸ್ಥೆ ಮತ್ತು ಸಪ್ನ ಬುಕ್‌ ಹೌಸ್ ಆಯೋಜಿಸಿದ್ದವು.

ADVERTISEMENT

ರಾಜೂರ ಮುಂದುವರೆದು, ‘ಪುಸ್ತಕದ ಮುಖಪುಟದಲ್ಲಿರುವ ಬಸವಣ್ಣನವರ ಭಾವಚಿತ್ರದ ಕೈಯಲ್ಲಿ ಸ್ಥಾವರ ಲಿಂಗವಿದೆ. ಇದರ ಬದಲಿಗೆ ಇಷ್ಟಲಿಂಗದ ಚಿತ್ರ ಇರಬೇಕು’ ಎಂದರು.

ಶಿರಹಟ್ಟಿಯ ಬಾಲೇಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು, ‘ಪುಸ್ತಕದ ಮೇಲೆ ಬಸವಣ್ಣವರ ಕೈಯಲ್ಲಿ ಸ್ಥಾವರ ಲಿಂಗ ಇರುವುದು ಕಲಾವಿದನ ಕಲ್ಪನೆ ಹೊರತು, ಬರಹಗಾರರ ಕಲ್ಪನೆ ಅಲ್ಲ. ಬದಲಾವಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಇಷ್ಟಲಿಂಗ ಇರಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ’ ಎಂದರು.

‘ಕಾಂಗ್ರೆಸ್‌ ಸರ್ಕಾರ ಇದ್ದಾಗ ಲಿಂಗಾಯತ ಪ್ರತ್ಯೇಕ ಹೋರಾಟದ ಸಂದರ್ಭದಲ್ಲೂ ವೀರಶೈವ ಲಿಂಗಾಯತ ಬೇರೆ, ಬೇರೆ ಅಲ್ಲ. ಒಂದೇ ಎಂಬುದನ್ನು ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ’ ಎಂದು ಸ್ವಾಮೀಜಿ ಅವರು ಪ್ರತಿಪಾದಿಸಿದರು. 

‘ಸಾವಿರಕ್ಕೂ ಹೆಚ್ಚು ಗ್ರಂಥ ಓದಿದ್ದೇನೆ. ನೀವು, ಕಲಬುರ್ಗಿ ಅವರು ಸಂಪಾದಿಸಿದ 14 ವಚನ ಸಂಪುಟಗಳಲ್ಲಿ, ಒಂದು ವಚನ ಪಾರಿಭಾಷಿಕ ಕೋಶದಲ್ಲಿ ಮೊಯಿಲಿ ಅವರು ಹೇಳಿದ್ದನ್ನೇ ಹೇಳಿದ್ದೀರಿ. ವೇದಿಕೆಯಲ್ಲಿ ಹೇಳಿದ್ದನ್ನು ಹೇಳಿಲ್ಲ’ ಎಂದು ರಾಜೂರ ಅವರಿಗೆ ಪ್ರಶ್ನಿಸಿದರು.

ಅದಕ್ಕೆ ರಾಜೂರ ಅವರು, ‘ಹಿಂದೆ ರಚಿಸಿದ ಸಂಪುಟದಲ್ಲಿ ಪ್ರಕ್ಷಿಪ್ತ ವಚನಗಳು ಸೇರಿದ್ದು ಮಿಶ್ರವಾಗಿವೆ. ಈಗ ಬಸವ ಸಮಿತಿಯಿಂದ ‘ಬಸವ ಯುಗದ ನಿಜ ವಚನಗಳು’ ಸಂಪುಟಗಳು ಬರಲಿವೆ. ಅದರಲ್ಲಿ ಏನು ನಡೆದು ಬಂದಿದೆ ಎಂಬುದನ್ನು ತಿಳಿಸಲಾಗಿದೆ’ ಎಂದರು.

‘ಲಿಂಗಾಯತ ಧರ್ಮದ ಸಿದ್ಧಾಂತಗಳು ಯಾವುವು? ಅಷ್ಟಾವರಣ, ಪಂಚಾಚಾರ್ಯ, ಷಟಸ್ಥಲ ಬಿಟ್ಟು ಲಿಂಗಾಯತ ಧರ್ಮ ಮಾಡಲು ಸಾಧ್ಯವೇ? ಇವುಗಳನ್ನು ಬಿಟ್ಟು ವೀರಶೈವರಿಗಾಗಲೀ, ಲಿಂಗಾಯತರಿಗಾಗಲೀ ಹೇಳಲಿಕ್ಕೆ ಆಗುವುದಿಲ್ಲ’ ಎಂದು ಸ್ವಾಮೀಜಿ ಹೇಳಿದರು.

ಆಗ ರಾಜೂರ ‘ಅದನ್ನು ಬಿಟ್ಟು ಆಚರಣೆಗಳ ಬಗ್ಗೆ ಹೇಳಿ’ ಎಂದರು. ಮಾತುಕತೆ ಬೇರೆಡೆ ಸಾಗುವುದನ್ನು ಅರಿತ ಆಯೋಜಕರು ಇಬ್ಬರ ನಡುವಿನ ಚರ್ಚೆಗೆ ವಿರಾಮ ಹಾಕಿದರು.

‘ಸಂಘರ್ಷದ ವಿಚಾರಗಳಿಗೆ ಆಸ್ಪದವಿಲ್ಲ’

ನಾನು ಕೃತಿಗಳಲ್ಲಿ ಮನಸ್ಸುಗಳ ಜೋಡಿಸುವ ವಿಶ್ವಸಂಸ್ಕೃತಿಗೆ ಆದ್ಯತೆ ನೀಡಿದ್ದೇನೆ ವಿನಾ ವೀರಶೈವ-ಲಿಂಗಾಯತ ಪ್ರತ್ಯೇಕತೆ ಸೇರಿದಂತೆ ನಾಗರಿಕತೆ-ಇತಿಹಾಸದ ಸಂಘರ್ಷದಂಥ ವಿಚಾರಗಳಿಗೆ ಆಸ್ಪದ ನೀಡಿಲ್ಲ’ ಎಂದು ಕೃತಿಕಾರರಾದ ವೀರಪ್ಪ ಮೊಯಿಲಿ ಹೇಳಿದರು. ‘ಮೂರೂ ಸಂಪುಟಗಳಲ್ಲಿ ಮಾನವನ ವಿಕಸನದಿಂದ ಹಿಡಿದು 16 17ನೇ ಶತಮಾನದವರೆಗಿನ ಸಂಗತಿಗಳನ್ನು ಸಂಶೋಧಿಸಿ ನೀಡಿದ್ದೇನೆ. ವೀರಶೈವ- ಲಿಂಗಾಯತ ಕುರಿತು ಸರ್ಕಾರ ಏನು ಹೇಳಿದೆ ಎಂಬುದು ನನಗೆ ಸಂಬಂಧಿಸಿಲ್ಲ. ಎಲ್ಲವನ್ನೂ ಜೋಡಿಸುವ ವಿಶ್ವಸಂಸ್ಕೃತಿಗೆ ಒತ್ತುನೀಡಿದ್ದೇನೆ. ಇತಿಹಾಸದ ಸಂಘರ್ಷಗಳಿಗೆ ಕೈ ಹಾಕಿಲ್ಲ. ಅದರ ಅಗತ್ಯವೂ ಇಲ್ಲ’ ಎಂದರು.

ಪುಸ್ತಕ ಪರಿಚಯ

ಕೃತಿ ಹೆಸರು: ವಿಶ್ವಸಂಸ್ಕೃತಿಯ ಮಹಾಯಾನ ಸಂಪುಟ 3 ಲೇಖಕ: ಎಂ.ವೀರಪ್ಪ ಮೊಯಿಲಿ ಪ್ರಕಟಣೆ: ಸಪ್ನ ಬುಕ್‌ ಹೌಸ್ ಪುಟಗಳು:666 ದರ: ₹795

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.