ADVERTISEMENT

ಬಾಗಲಕೋಟೆ: ಮಾವಿನ ಹಣ್ಣಿನ ಪೂರೈಕೆಯಲ್ಲಿ ಕುಸಿತ

ಸೈಕ್ಲೋನ್ ಪರಿಣಾಮ: ಮಾವಿನ ಇಳುವರಿ ಕುಂಠಿತ

ಬಸವರಾಜ ಹವಾಲ್ದಾರ
Published 19 ಏಪ್ರಿಲ್ 2025, 4:29 IST
Last Updated 19 ಏಪ್ರಿಲ್ 2025, 4:29 IST
ಬಾಗಲಕೋಟೆಯ ಮಾರುಕಟ್ಟೆಗೆ ಬಂದಿರುವ ಮಾವಿನ ಹಣ್ಣು
ಬಾಗಲಕೋಟೆಯ ಮಾರುಕಟ್ಟೆಗೆ ಬಂದಿರುವ ಮಾವಿನ ಹಣ್ಣು   

ಬಾಗಲಕೋಟೆ: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆ ಜೋರಾಗಿರುತ್ತದೆ. ಆದರೆ, ಈ ವರ್ಷ ಮಾವಿನ ಹಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ಹಣ್ಣುಗಳ ಭರಾಟೆ ಕಡಿಮೆಯಾಗಿದೆ.

ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದರಿಂದ ಹಣ್ಣುಗಳ ಬೆಲೆ ಹೆಚ್ಚಿದೆ. ಪರಿಣಾಮ ಮಾರಾಟ ಪ್ರಮಾಣದಲ್ಲಿ ಕುಸಿತವಾಗಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಾಗಿದೆ.

ಯುಗಾದಿ ಆಸು–‍ಪಾಸಿನಲ್ಲಿ ಆರಂಭವಾಗುವ ಮಾವಿನ ಹಣ್ಣಿನ ಸೀಸನ್‌, ಬಸವ ಜಯಂತಿ ವೇಳೆ ಉತ್ತುಂಗವನ್ನು ಮುಟ್ಟಿರುತ್ತಿತ್ತು. ಹೋಳಿಗೆ, ಶೀಕರಣೆ ಮಾಡುವುದರಿಂದ ಮಾರಾಟವೂ ಜೋರಾಗಿರುತ್ತದೆ. 

ADVERTISEMENT

ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಸೈಕ್ಲೋನ್ ಪರಿಣಾಮದಿಂದಾಗಿ ಅಲ್ಲಿ ಮಾವಿನ ಇಳುವರಿ ಕಡಿಮೆ ಆಗಿದೆ.  ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬರುತ್ತಿಲ್ಲ. ಸ್ಥಳೀಯ ಮಾವಿನ ಹಣ್ಣನ್ನೇ ಮಾರಾಟಗಾರರು ನೆಚ್ಚಿಕೊಳ್ಳಬೇಕಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಸಲ ಮಾವಿನ ಹಣ್ಣು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಬೆಲೆ ಹೆಚ್ಚಾಗಿರುವುದರಿಂದ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.

3,000 ದಿಂದ 800 ಬಾಕ್ಸ್‌ಗೆ ಇಳಿಕೆ: ಜಿಲ್ಲೆಯಲ್ಲಿ ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶನಿವಾರ ಮಾವಿನ ಹಣ್ಣು ಪೂರೈಕೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿಯಿಂದ ಬರುತ್ತದೆ. ಹಿಂದಿನ ವರ್ಷ ಒಂದು ಸಲಕ್ಕೆ ಜಿಲ್ಲೆಗೆ 3 ಸಾವಿರ ಬಾಕ್ಸ್‌ ಹಣ್ಣು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 800ಕ್ಕೆ ಇಳಿದೆ. 

ಮಹಾರಾಷ್ಟ್ರದ ರತ್ನಾಗಿರಿ ಮತ್ತು ದೇವಗಡ  ಆಪೂಸ್, ರಾಜ್ಯದ ಕಲ್ಮಿ, ಸಿಂದೂರ, ಬೇನಿಷ್ ಮಾವು ಹೆಚ್ಚಾಗಿ ತರಿಸಲಾಗುತ್ತದೆ. ಕಳೆದ ವರ್ಷ ಆಪೂಸ್ ಒಂದು ಬಾಕ್ಸ್‌ಗೆ (12, 15, 18 ಹಣ್ಣಿನ ಬಾಕ್ಸ್) ₹400 ರಿಂದ 500 ಇರುತ್ತಿದ್ದದ್ದು, ಈಗ ₹600 ರಿಂದ ₹700ಕ್ಕೆ ಏರಿಕೆ ಆಗಿದೆ. ಕಲ್ಮಿ ಹಣ್ಣು ಕೆಜಿಗೆ ₹70 ರಿಂದ ₹100 ಇದ್ದಿದ್ದು, ಈಗ ₹100 ರಿಂದ ₹140, ಸಿಂದೂರ ಕೆಜಿಗೆ ₹50 ರಿಂದ 80 ಇದ್ದಿದ್ದು, ಈಗ ₹90 ರಿಂದ 120ಕ್ಕೆ ಏರಿಕೆ ಆಗಿದೆ.

ಮೂರ್ನಾಲ್ಕು ವರ್ಷಗಳಿಗೊಮ್ಮೆ ಮಾರುಕಟ್ಟೆಗೆ ಹಣ್ಣಿನ ಪೂರೈಕೆ ಕಡಿಮೆ ಆಗಿ ಬೆಲೆ ಹೆಚ್ಚಳ ಆಗುತ್ತದೆ. ಆಪೂಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ
ಬಂದೇನವಾಜ್ ಬಾಳಿಕಾಯಿ ವ್ಯಾಪಾರಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.