
ಕುಳಗೇರಿ ಕ್ರಾಸ್ ಸಮೀಪದ ಸೋಮನಕೊಪ್ಪ ಗ್ರಾಮದ ರಸ್ತೆ ಹದಗೆಟ್ಟಿದೆ
ಕುಳಗೇರಿ ಕ್ರಾಸ್: ಸವದತ್ತಿ–ಪಟ್ಟದಕಲ್ಲು ರಾಜ್ಯ ಹೆದ್ದಾರಿ 14ಕ್ಕೆ ಹೊಂದಿಕೊಂಡಿರುವ ಸೋಮನಕೊಪ್ಪ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದ್ದರಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಹದಗೆಟ್ಟ ರಸ್ತೆಯಲ್ಲೇ ಸೋಮನಕೊಪ್ಪ ಗ್ರಾಮ ತಲುಪುವ ಜನರು, ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಸ್ವಂತ ವಾಹನದಲ್ಲಿ ಪ್ರಯಾಣಿಸಿದರೆ ಮಾತ್ರ ಗ್ರಾಮವನ್ನು ಸಮಯಕ್ಕೆ ಸರಿಯಾಗಿ ತಲುಪಬಹುದು. ಇಲ್ಲವಾದರೆ ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಗ್ರಾಮದ ನಿವಾಸಿ ರಮೇಶ್ ಮಣ್ಣೂರ.
‘ಗ್ರಾಮದ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿದಿನ 900 ಮೀಟರ್‌ನಷ್ಟು ನಡೆದು ರಾಜ್ಯ ಹೆದ್ದಾರಿ 14 ಅನ್ನು ತಲುಪಬೇಕು. ಕ್ರಾಸ್‌ನಲ್ಲಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಅಲ್ಲಿಂದ 2 ಕಿ.ಮೀ. ದೂರವಿರುವ ಕುಳಗೇರಿ ಕ್ರಾಸ್‌ವರೆಗೂ ನಡೆದುಕೊಂಡೇ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
ಗ್ರಾಮಕ್ಕೆ ಒಂದು ಬಸ್ ಬೆಳಿಗ್ಗೆ ಹಾಗೂ ರಾತ್ರಿ ಮಾತ್ರ ಸಂಚರಿಸುತ್ತದೆ. ಶಾಲಾ– ಕಾಲೇಜುಗಳ ಆರಂಭ ಹಾಗೂ ಮುಕ್ತಾಯದ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲದ್ದರಿಂದ ನಡೆದುಕೊಂಡು ಬರುವುದು ಅನಿವಾರ್ಯವಾಗಿದೆ. ಗ್ರಾಮಸ್ಥರು ವಿವಿಧ ಕೆಲಸಕ್ಕೆ ಹಲವಾರು ಬಾರಿ ನಡೆದುಕೊಂಡೇ ಹೋಗಬೇಕಿದೆ.
‘ಅನಾರೋಗ್ಯದಿಂದ ಬಳಲುತ್ತಿರು ವವರು ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಿದೆ. ರಸ್ತೆ ದುರಸ್ತಿ ಮಾಡಬೇಕು. ಬಸ್ ಸಂಚಾರ ಹೆಚ್ಚಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.
ಇನ್ನೂ ಮುಗಿಯದ ಸೋಮನಕೊಪ್ಪ ರಸ್ತೆ ಕಾಮಗಾರಿ
ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೊಂದರೆ
‘ಟೆಂಡರ್‌ಗೆ ಕ್ರಮ’
‘ಸೋಮನಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 400 ಮೀಟರ್‌ನಷ್ಟು ರಸ್ತೆ ಕಾಮಗಾರಿ ಪೂರ್ಣವಾಗಿದೆ. ಇನ್ನುಳಿದ 500 ಮೀಟರ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ವೈ.ಎಫ್. ಆಡಿನ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.