ಬಾಗಲಕೋಟೆ: ಆಲಮಟ್ಟಿ ಜಲಾಶಯ ನಿರ್ಮಾಣ ಆರಂಭವಾಗಿ 6 ದಶಕಗಳೇ ಕಳೆದಿವೆ. ಜಲಾಶಯ ನಿರ್ಮಾಣವೇನೋ ಆಯಿತು. ಆದರೆ, ನೀರಾವರಿ ಒದಗಿಸುವ ಯೋಜನೆ ಪೂರ್ಣವಾಗಿಲ್ಲ. ಜತೆಗೆ ಯೋಜನೆ ಜಾರಿಗೆ ಒಂದೊಂದೇ ಹೊಸ ಕಂಟಕಗಳು ಎದುರಾಗುತ್ತಿವೆ.
ದಶಕದ ಹಿಂದೆ ನ್ಯಾಯಾಧೀಕರಣದ ತೀರ್ಪು ಹೊರಬಿದ್ದಾಗ ಇನ್ನೇನು ಹೊಲಗಳಿಗೆ ನೀರು ಹರಿಯಲಿದೆ, ಮುಳುಗಡೆಯಾಗುವ ಭೂಮಿಗೆ ಪರಿಹಾರ ದೊರೆಯಲಿದೆ ಎಂದು ರೈತರು ಸಂಭ್ರಮಿಸಿದ್ದರು. ಆದರೆ, ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ. ರಾಜಕೀಯ ಪಕ್ಷದ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರೆ, ನ್ಯಾಯ ಕೇಳಬೇಕಾಗಿದ್ದ ಹೋರಾಟಗಾರರ ಧ್ವನಿ ಉಡುಗಿ ಹೋಗಿದೆ.
ಎತ್ತರಕ್ಕೆ ಮಹಾರಾಷ್ಟ್ರದ ಆಕ್ಷೇಪ:
ನ್ಯಾಯಾಧೀಕರಣದ ತೀರ್ಪು ಬಂದು ಹತ್ತು ವರ್ಷಕ್ಕೂ ಮೇಲಾಗಿದ್ದರೂ, ಮಹಾರಾಷ್ಟ್ರ ತೀರ್ಪು ಕುರಿತು ಆಕ್ಷೇಪಣೆ ಸಲ್ಲಿಸಲು ಮುಂದಾಗಿರುವುದು ಹೊಸ ಸಂಕಷ್ಟವೊಂದು ರಾಜ್ಯಕ್ಕೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.
‘ನೀರು ನಿಲ್ಲಿಸಿದರೆ ಕೊಲ್ಹಾಪುರ, ಸಾಂಗ್ಲಿಯಲ್ಲಿ ಪ್ರವಾಹ ಉಂಟಾಗುತ್ತದೆ. ಆದ್ದರಿಂದ, ಸುಪ್ರೀಂ ಕೋರ್ಟ್‌ನಲ್ಲಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬಾರದು ಎಂದು ಮನವಿ ಸಲ್ಲಿಸಲಾಗುವುದು’ ಎಂದು ಮಹಾರಾಷ್ಟ್ರದ ಸಚಿವರು ಅಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಹೇಳಿದ್ದಾರೆ. ಇದರಿಂದ ರಾಜ್ಯಕ್ಕೆ ಮತ್ತೊಂದು ಸಮಸ್ಯೆ ಎದುರಾಗಲಿದೆ.
ಆಲಮಟ್ಟಿ ಎತ್ತರ ಹೆಚ್ಚಳ ಪ್ರಶ್ನಿಸಿ ಆಂಧ್ರಪ್ರದೇಶ ನ್ಯಾಯಾಲಯದ ಮೊರೆ ಹೋಗಿದೆ. ಜತೆಗೆ ಆಂಧ್ರಪ್ರದೇಶವು ತೆಲಂಗಾಣ, ಆಂಧ್ರಪ್ರದೇಶ ಎಂದು ಇಬ್ಭಾಗವಾಗಿದೆ. ಎರಡೂ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿಕೊಳ್ಳುವ ವಿಷಯ ಪ್ರಶ್ನಿಸಿಯೂ ನ್ಯಾಯಾಲಯದ ಅರ್ಜಿ ಹಾಕಲಾಗಿದೆ.
ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ: ನ್ಯಾಯಾಧೀಕರಣ ತೀರ್ಪು ಬಂದು ದಶಕ ಕಳೆದಿದ್ದರೂ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ.
ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನೋಟಿಫಿಕೇಷನ್ ಹೊರಡಿಸಲು ಹೇಗೆ ಬರುತ್ತದೆ ಎಂಬುದು ಬಿಜೆಪಿ ನಾಯಕರ ವಾದವಾದರೆ, ಸಂಬಂಧಿಸಿದ ರಾಜ್ಯಗಳಲ್ಲಿ ಆಡಳಿತ ನಡೆಸುವವರನ್ನು ಕರೆಯಿಸಿ, ಮಾತನಾಡಿ ಪರಿಹರಿಸುವ ಕೆಲಸವನ್ನು ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕರ ವಾದ.
ಅನುದಾನದ ಕೊರತೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅಂದಾಜು ವೆಚ್ಚದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ವೇದಿಕೆಗಳಲ್ಲಿ ಯೋಜನೆ ಪೂರ್ಣಗೊಳಿಸುವ ಮಾತನಾಡುವ ರಾಜಕೀಯ ನಾಯಕರು, ಅಧಿಕಾರಕ್ಕೆ ಬಂದಾದ ಮೇಲೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ.
ಬಾಂಡ್ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂಬ ಸುದ್ದಿಗೆ ಬಾಂಡ್ ಬಿಡುಗಡೆಯ ಬಗ್ಗೆ ಮಾತನಾಡಿಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಮಂಡಲ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೆ ಈಡೇರಿಸಿಲ್ಲ. ದಿನಗಳು ಮಾತ್ರ ಉರುಳುತ್ತಲೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.