ADVERTISEMENT

ಬಾಗಲಕೋಟೆ | ಕಬ್ಬು ರೈತರ ಪ್ರತಿಭಟನೆ, ವಾಹನಕ್ಕೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 16:09 IST
Last Updated 3 ನವೆಂಬರ್ 2025, 16:09 IST
   

ಬಾಗಲಕೋಟೆ: ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತರು ಸೋಮವಾರ ರಾತ್ರಿ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ, ಕೆಲ ಕಿಡಿಗೇಡಿಗಳು ವಾಹನವೊಂದರ ಗಾಜು ಒಡೆದಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರ ವಿವಿಧ ಸಂಘಟನೆಗಳಿಂದ ಪ್ರಸಕ್ತ ಹಂಗಾಮಿಗೆ ಟನ್‌ ಕಬ್ಬಿಗೆ ₹3,500 ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ವಿಜಯಪೂರ-ಜಮಖಂಡಿ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ ಹಾಗೂ ವಿಜಯಪುರ ಜಿಲ್ಲೆಯ ಬಬಲೇಶ್ವರ ಅನೇಕ ರೈತರು ಪ್ರತಿಭಟನೆಯಲ್ಲಿ ಭಾವಹಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ಮುಖ್ಯಮಂತ್ರಿ, ಸಕ್ಕರೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಮತ್ತು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. 

ADVERTISEMENT

ಪಕ್ಕದ ಮಹಾರಾಷ್ಟ್ರದಲ್ಲಿ ಟನ್‌ ಕಬ್ಬಿಗೆ ₹3,600 ಬೆಲೆ ಕೊಡುತ್ತಿದ್ದು, ಅವರಿಗೆ ಸಾಧ್ಯವಾಗಿರುವಾಗ ಕರ್ನಾಟಕದ ಸಕ್ಕರೆ ಕಾರ್ಖಾನೆಯವರಿಗೆ ಏನಾಗಿದೆ. ಒಂದು ಟನ್‌ ಕಬ್ಬಿನಿಂದ ಲಕ್ಷಾಂತರ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತ ಮಾತ್ರ ತನ್ನ ಕಷ್ಟಕ್ಕೆ ತಕ್ಕಂತೆ ಬೆಲೆ ದೊರೆಯದೆ ಕಷ್ಟದಲ್ಲಿ ಬೀದಿಗೆ ಬರಬೇಕಾಗಿದೆ ಎಂದು ದೂರಿದರು.

ಜಮಖಂಡಿ ವಕೀಲರ ಸಂಘದಿಂದ ಪ್ರತಿಭಟನೆಗೆ ಬೆಂಬಲ ನೀಡಿ ವಕೀಲರು ಕೋರ್ಟ್‌ನಿಂದ ಹೊರಗುಳಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೈತ ಮುಖಂಡ ಬಸವರಾಜ ಸಿಂಧೂರ, ಪ್ರದೀಪ ಮೆಟಗುಡ್ಡ, ರೈತ ಸಂಘದ ಶ್ರೀಶೈಲ ಭೂಮಾರ, ಕಲ್ಲು ಬಿರಾದಾರ, ರಾಜು ನದಾಪ, ಸುರೇಶ ಹಂಚಿನಾಳ, ಸಿದ್ದಪ್ಪ ಬನಜನವರ, ಬಸವರಾಜ ನ್ಯಾಮಗೌಡ, ಸಂಗಪ್ಪ ನ್ಯಾಮಗೌಡ, ಶಿವಶಂಕರ ಪಾಟೀಲ್, ಮುತ್ತು ಹೊಸಮನಿ ಸೇರಿದಂತೆ ನೂರಾರು ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.