ADVERTISEMENT

ಬಾಗಲಕೋಟೆ | ಎತ್ತುಗಳ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತ

ಬಸವರಾಜ ಹವಾಲ್ದಾರ
Published 29 ಫೆಬ್ರುವರಿ 2024, 5:43 IST
Last Updated 29 ಫೆಬ್ರುವರಿ 2024, 5:43 IST
ಬಾಗಲಕೋಟೆಯ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಯಲ್ಲಿ ಮಾರಾಟಕ್ಕೆ ತಂದಿರುವ ಎತ್ತುಗಳು
ಬಾಗಲಕೋಟೆಯ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಯಲ್ಲಿ ಮಾರಾಟಕ್ಕೆ ತಂದಿರುವ ಎತ್ತುಗಳು   

ಬಾಗಲಕೋಟೆ: ‘ಮಳಿ ಇಲ್ಲ, ಬೆಳಿ ಇಲ್ಲ. ಎತ್ತು ಮೇಯ್ಸೋದು ವಜ್ಜ ಆಗ್ಯಾದ. ಮನಿಗೆ ದುಡದ ಬಸವಣ್ಣನ (ಎತ್ತು) ಉಪಾಸ ಹಾಕಾಕ ಆಗತೈತೇನ್ರಿ. ಅದಕ್ಕ ಮಾರಾಕ ಬಂದೀನಿ. ಆದ್ರ, ತುಂಬೋರು (ಮಧ್ಯವರ್ತಿಗಳು) ಬರಲಾರದ್ದಕ್ಕ ಅಡ್ಡಾ–ದಿಡ್ಡಿಗೆ ಎತ್ತ ಕೇಳಕತ್ಯಾರ, ಅರ್ಧಕರ್ಧ ಕಡಿಮಿಗೆ ಕೇಳಾತರ...’

ಹೀಗೆಂದು ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಗೆ ಎತ್ತುಗಳನ್ನು ಮಾರಾಟಕ್ಕೆ ತಂದಿರುವ ಶಿರೂರ ಗ್ರಾಮದ ರೈತ ಬಸವರಾಜ ಕೊಟೆಕಲ್‌ ಸಂಕಷ್ಟ ತೋಡಿಕೊಂಡರು.

‘ಜೋಡೆತ್ತಿಗೆ ₹2.30 ಲಕ್ಷ ಹೇಳೀನಿ. ಎರಡು ದಿನ ಆತು. ₹1.20 ಲಕ್ಷಕ್ಕೆ ಕೇಳತಾರ. ಮೇವಿಲ್ಲದ್ದಕ್ಕ ಕೊಳ್ಳೋರ ಇಲ್ಲದಂಗಾಗೈತಿ. ಎತ್ತಗಳನ್ನು ಇಟ್ಟುಕೊಳ್ಳಂಗೂ ಇಲ್ಲ. ಮಾರಂಗೂ ಇಲ್ಲದಂತ ಆಗೈತಿ’ ಎಂದರು.

ADVERTISEMENT

‘ಗಳೆವೆಲ್ಲ ಮುಗಿದಾವು. ಹೊಲದಾಗ ಕೆಲಸಿಲ್ಲ. ಮಳಿ ಬರಾತನ ಮೇಯ್ಸಿಗೊಂಡಿರಬೇಕ. ಆದ್ರ ಮನ್ಯಾಗ ಮೇವಿಲ್ಲ. ಕೊಂಡು ತಂದ ಮೇಯ್ಸಾಕ ರೊಕ್ಕಿಲ್ಲ. ಈಗಂತೂ ಮಾರಾದ. ಮುಂದ ಮಳಿ ಆದ್ರ ಮತ್ತೆ ತಗೊಂಡರಾತು’ ಎಂದು ಧ್ವನಿಗೂಡಿಸಿದರು ಯಡಹಳ್ಳಿ ಗ್ರಾಮದ ರೈತ ಮಾಗುಂಡಪ್ಪ.

ಸಾವಿರಾರು ಎತ್ತುಗಳು,ಕೊಳ್ಳೋರಿಲ್ಲ:

ಜಾನುವಾರು ಜಾತ್ರೆಗೆ ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಯ ರೈತರು ಸಾವಿರಾರು ಸಂಖ್ಯೆಯಲ್ಲಿ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಆದರೆ, ಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಒಂದು ಜಾತ್ರೆಯಲ್ಲಿ ಖರೀದಿಸಿ, ಮತ್ತೊಂದು ಜಾತ್ರೆಯಲ್ಲಿ ಹತ್ತಾರು ಸಾವಿರ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ದಲ್ಲಾಳಿಗಳೂ ಖರೀದಿಗೆ ಮುಂದೆ ಬರುತ್ತಿಲ್ಲ. ಮೇವಿಲ್ಲದ್ದರಿಂದ ರೈತರಂತೂ ಖರೀದಿ ಮಾಡುವ ಸಾಹಸ ಮಾಡುತ್ತಿಲ್ಲ.

ಎತ್ತು, ಹೋರಿಗಳ ಜೋಡಿ ₹1.20 ಲಕ್ಷದಿಂದ ₹3.50 ಲಕ್ಷದವರೆಗೆ ಮಾರಾಟವಾಗುತ್ತಿದ್ದವು. ಈ ಸಲ ಅರ್ಧ ಬೆಲೆಗೂ ಕೇಳುತ್ತಿಲ್ಲ. ಎರಡನೇ ದಿನ ದಲ್ಲಾಳಿಗಳು ಎರಡು ಟ್ರಕ್‌ಗಳಲ್ಲಿ ಖರೀದಿ ಒಯ್ದಿದ್ದು ಬಿಟ್ಟರೆ, ಅಲ್ಲೊಂದು, ಇಲ್ಲೊಂದು ವ್ಯಾಪಾರ ಆಗುತ್ತಿವೆ ಎನ್ನುತ್ತಾರೆ ರೈತರು.

‘ಈ ವರ್ಸ ಮಳಿ ಸರಿಯಾಗಿಲ್ಲ. ಒಂದು ಜೋಡಿ ಎತ್ತು ಚೆನ್ನಾಗಿ ಸಾಕಬೇಕಂದರ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಬೇಕಾಗತ್ತ. ಮೆಕ್ಕೆಜೋಳ ಕ್ವಿಂಟಲ್‌ಗೆ ₹2 ಸಾವಿರ ದಾಟೈತಿ. ರೈತನ ಸ್ಥಿತಿ ಅಡಕತ್ತರಿಗೆ ಸಿಕ್ಕಂಗ ಆಗೈತಿ’ ಎಂದರು.

‘ಎತ್ತುಗಳನ್ನು ಖರೀದಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಎಲ್ಲ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಮೊದಲ, ಮನಿಗಿ ಎರಡು ಎತ್ತು ಇರುತ್ತಿದ್ದವು. ಈಗ ಗ್ರಾಮದಾಗ ಇಪ್ಪತ್ತು ಜೋಡಿ ಎತ್ತು ಅದಾವು. ಒಕ್ಕಲುತನ ತಗದು, ಪಾಲಿಗೆ ನೀಡೋರು ಹೆಚ್ಚಾಗಕತ್ತ್ಯಾರ’ ಎಂದು ಬೀಳಗಿಯ ಬಸಪ್ಪ ಪಲ್ಲೇದ ಹೇಳಿದರು.

ಹೋರಿಗಳ ಮಾರಾಟಕ್ಕೆ ತಂದಿರುವ ಬೀಳಗಿಯ ಬಸಪ್ಪ ಪಲ್ಲೇದ ಗ್ರಾಹಕರಿಗಾಗಿ ಕಾಯ್ದು ಕುಳಿತಿರುವುದು
ಅರ್ಧ ಬೆಲೆಗೆ ಕೇಳುತ್ತಿರುವ ಖರೀದಿದಾರರು ಸಾಕಲಾಗದೆ ಮಾರಾಟಕ್ಕೆ ಮುಂದಾದ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.