ಬಾಗಲಕೋಟೆ: ಮಾರುಕಟ್ಟೆಯಲ್ಲಿ ಹೆಸರುಕಾಳು, ಸೂರ್ಯಕಾಂತಿ ಬೆಲೆ ಕುಸಿದಿದೆ. ಬೆಂಬಲ ಬೆಲೆಯಡಿ ಮಾರಾಟ ಮಾಡಲು ಜಿಲ್ಲೆಯಲ್ಲಿ ಇನ್ನೂ ಖರೀದಿ ಕೇಂದ್ರಗಳು ಆರಂಭವಾಗಿಲ್ಲ. ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಬೇಕಾದ ಸ್ಥಿತಿಯಲ್ಲಿ ರೈತರಿದ್ದಾರೆ.
ಹೆಸರುಕಾಳು ಪ್ರತಿ ಕ್ವಿಂಟಲ್‌ಗೆ ₹8,768 ಮತ್ತು ಸೂರ್ಯಕಾಂತಿಗೆ ₹7,721 ಬೆಂಬಲ ಬೆಲೆ ಘೋಷಿಸಲಾಗಿದೆ. ಮಾರುಕಟ್ಟೆಯಲ್ಲಿ ಇದಕ್ಕಿಂತ ಕಡಿಮೆ ಬೆಲೆ ಇದೆ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂಬುದು ರೈತರ ಆಗ್ರಹ.
ಹೆಸರುಕಾಳು ಆರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ₹10,500ರಂತೆ ಮಾರಾಟವಾಗಿತ್ತು. ದಿನ ಕಳೆದಂತೆ ಬೆಲೆ ಇಳಿಮುಖವಾಗುತ್ತಿದೆ. ಈಗ ಪ್ರತಿ ಕ್ವಿಂಟಲ್‌ಗೆ ಸರಾಸರಿ ₹4,250ಕ್ಕೆ ಮಾರಾಟವಾಗುತ್ತಿದೆ. ಸತತ ಮಳೆಯಿಂದ ಹೆಸರು ಬುಡ್ಡಿ ಬಿಡಿಸಲು ಸಾಧ್ಯವಾಗಿಲ್ಲ. ಹೊಲದಲ್ಲೇ ಬೆಳೆ ಕೊಳೆಯಲು ಶುರುವಾಗಿದೆ. ಅದರಲ್ಲೂ ಒಂದಷ್ಟು ಹೆಸರುಕಾಳು ಬಂದಿದ್ದು, ಗುಣಮಟ್ಟ ಸರಿ ಇಲ್ಲವೆಂದು ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ’ ಎಂದು ರೈತ ಮಲ್ಲಿಕಾರ್ಜುನ ಪಾಟೀಲ ದೂರಿದರು.
‘ಹೆಸರುಕಾಳು ಮಾರುಕಟ್ಟೆಗೆ ಬರಲು ಆರಂಭಿಸಿ ತಿಂಗಳ ಮೇಲಾಗಿದೆ. ಹೆಚ್ಚು ದಿನ ಇಟ್ಟರೆ, ಹುಳುಗಳಿಂದ ಕಾಳು ಹಾಳಾಗುತ್ತದೆ. ಖರೀದಿ ಕೇಂದ್ರ ಇನ್ನೂ ಆರಂಭಿಸಿಲ್ಲ. ಕೇಂದ್ರ ಆರಂಭಿಸಿದ ಬಳಿಕ ಮತ್ತೆ ಹತ್ತಾರು ದಿನ ಹೆಸರು ನೋಂದಣಿಗೆ ಹೋಗುತ್ತದೆ’ ಎಂದರು.
‘ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಪ್ರತಿ ಕ್ವಿಂಟಲ್‌ಗೆ ₹5,809ಕ್ಕೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆಗಿಂತ ಕ್ವಿಂಟಲ್‌ಗೆ ₹1,900 ಕಡಿಮೆ ಇದೆ. ಸೂರ್ಯಕಾಂತಿಯ ಕಟಾವು ಆರಂಭವಾಗಿದೆ. ಎರಡು ದಿನಗಳಿಂದ ಮಳೆ ಆಗುತ್ತಿದೆ. ಮಳೆಯಿಂದ ಸೂರ್ಯಕಾಂತಿ ತೆನೆಯಲ್ಲೇ ಕಾಳು ಕೊಳೆಯುತ್ತಿದೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ರೈತರು ತಿಳಿಸಿದರು.
Quote - ಸೆಪ್ಟೆಂಬರ್ 29ರಂದು ಕಾರ್ಯಪಡೆ ಸಮಿತಿ ಸಭೆ ಕರೆಯಲಾಗಿದೆ. ಶೀಘ್ರದಲ್ಲಿಯೇ ಖರೀದಿ ಕೇಂದ್ರ ಆರಂಭಿಸಲಾಗುವುದು ವಿ.ಡಿ. ಪಾಟೀಲ ಕಾರ್ಯದರ್ಶಿ ಎಪಿಎಂಸಿ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.