ಹುನಗುಂದ: ಸಮಾಜ ಇಂದು ಕವಲು ದಾರಿಯಲ್ಲಿ ಸಾಗುತ್ತಿದೆ. ವೀರಶೈವ - ಲಿಂಗಾಯತ ಸಮಾಜದವರು ಎಚ್ಚತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಉಚಿತ ಪ್ರಸಾದ ನಿಲಯದಲ್ಲಿ ಸೆ.19ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶದ ಹಿನ್ನಲೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರೊಂದಿಗೆ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮತಾಂಡಿದರು.
ಸ್ವ ಹಿತಾಶಕ್ತಿಗಾಗಿ ವೀರಶೈವ-ಲಿಂಗಾಯತ ಬೇರೆ ಬೇರೆ ಎನ್ನುವುದನ್ನು ಬಿಡಬೇಕು. ಈಚೆಗೆ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯದ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಆದರೆ ಅವರೆಲ್ಲರೂ ಎಂದೂ ವೀರಶೈವ- ಲಿಂಗಾಯತರು ಆಗುವುದಿಲ್ಲ. ಎಲ್ಲ ಜಾತಿ - ಧರ್ಮದವರಿಗೆ ಶಿಕ್ಷಣ ಕೊಟ್ಟಿದ್ದು, ನಮ್ಮ ಸಮುದಾಯದವರು. ಎಲ್ಲ ಸಮುದಾಯಗಳನ್ನು ಒಪ್ಪಿ-ಅಪ್ಪಿಕೊಂಡುವ ಹೋಗುವ ತಾಕತ್ತು ವೀರಶೈವ - ಲಿಂಗಾಯತ ಸಮುದಾಯಕ್ಕಿದೆ ಎಂದರು.
ಮುಖಂಡ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ಜಾತಿ ಗಣತಿ ಹೆಸರಲ್ಲಿ ರಾಜ್ಯ ಸರ್ಕಾರ ಸಮುದಾಯಗಳ ದಾರಿ ತಪ್ಪಿಸುತ್ತಿದ್ದು, ಒಗ್ಗಟ್ಟನ್ನು ಒಡೆಯುವ ಕಾರ್ಯ ಮಾಡುತ್ತಿದೆ. ಎಲ್ಲರೂ ಒಂದಾಗಿ ಹೋದಾಗ ಆಸ್ತಿತ್ವ ಇರುತ್ತದೆ. ಇಲ್ಲದಿದ್ದರೆ ಸಮುದಾಯಕ್ಕೆ ಅಸ್ಥಿತ್ವ ಇರುವುದಿಲ್ಲ ಎಂದರು.
ಮಹಾಂತಯ್ಯ ಗಚ್ಚಿನಮಠ ಮಾತನಾಡಿ, ಸಮುದಾಯಗಳನ್ನು ಬೇರೆ ಬೇರೆ ಮಾಡುವುದು ಸರಿಯಲ್ಲ. ಹಿಂದಿನಿಂದಲೂ ವೀರಶೈವ ಲಿಂಗಾಯತ ಸಮುದಾಯಗಳು ಒಂದೇ ಆಗಿವೆ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ಸುಭಾಷ್ ತಾಳಿಕೋಟಿ, ಎ.ಎಸ್.ಪಾವಟೆ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮಠ, ಸಂಗಣ್ಣ ಚಿನಿವಾಲರ, ಮಹಾಂತಕ್ಕ ಬಾವಿಕಟ್ಟಿ, ಅರುಣ ದುದ್ದಗಿ, ಬಸವರಾಜ ಕೆಂದೂರು, ಮಹಾಂತೇಶ ಹೊಸೂರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.