ADVERTISEMENT

ಇಳಕಲ್‌: ವಚನ ಗ್ರಂಥಗಳ ರಥೋತ್ಸವ ಇಂದು

ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವ

ಬಸವರಾಜ ಅ.ನಾಡಗೌಡ
Published 18 ಆಗಸ್ಟ್ 2025, 4:03 IST
Last Updated 18 ಆಗಸ್ಟ್ 2025, 4:03 IST
ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ
ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ   

ಇಳಕಲ್‌: ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಶ್ರಾವಣದ ಕೊನೆಯ ಸೋಮವಾರ ಆ. 18ರಂದು ವಚನ ಗ್ರಂಥಗಳ ರಥೋತ್ಸವ ಹಾಗೂ ಆ. 19ರಂದು ವಚನ ಸಾಹಿತ್ಯದ ತಾಡೋಲೆ ಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ.

ಚಿತ್ತರಗಿ -ಇಳಕಲ್ ಪೀಠದ 16 ನೇ ಪೀಠಾಧಿಪತಿ ಆಗಿದ್ದ ಮಹಾತಪಸ್ವಿ, ಪರಮ ದಾಸೋಹಿ, ಚಿತ್ತರಗಿ ಚಿಜ್ಯೋತಿ ಎಂದೇ ಖ್ಯಾತರಾಗಿದ್ದವರು ವಿಜಯ ಮಹಾಂತ ಶಿವಯೋಗಿಗಳು. ಹಾಸನ ಜಿಲ್ಲೆ ಸಸಿವಾಳದ ಮಳೆಯಪ್ಪನವರು ಕ್ರಿ.ಶ 1879ರಲ್ಲಿ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಪೀಠಾಧಿಪತಿಯಾಗುವ ಮೂಲಕ ವಿಜಯ ಮಹಾಂತ ಶಿವಯೋಗಿಗಳಾದರು. ಬೆನ್ನಿಗೆ ವಚನಗಳ ಕಟ್ಟು, ಬಿಳಿ ಕಪನಿ, ಕಾವಿ ಪೇಟ, ಕಾಲಿಗೆ ಚರ್ಮದ ಜೋಡು ತೊಟ್ಟು, ಪ್ರೀತಿಯ ಆಕಳು ‘ಮಹಾಂತಮ್ಮ’ಳೊಂದಿಗೆ ಕುದುರೆ ಸವಾರರಾಗಿ ನಾಡು ಸುತ್ತಿದರು.

ವಿಜಯ ಮಹಾಂತ ಶಿವಯೋಗಿಗಳು ಬಸವಣ್ಣನವರನ್ನು ‘ಕಲ್ಯಾಣದಪ್ಪ’ ಎನ್ನುತ್ತಿದ್ದರು. ಅವರು ನಾಡು ಸುತ್ತಿ ವಚನಗಳನ್ನು ಪ್ರಸಾರ ಮಾಡಿದರು. ಶಿವಯೋಗಿಗಳ ಇಚ್ಛಾಬಲ ಹಾಗೂ ಮಾತಿನ ಪರಿಣಾಮಗಳಲ್ಲಿ ಭಕ್ತರು ಪವಾಡಗಳನ್ನು ಕಂಡರು. ‘ನೀವೇಕೆ ಕಾವಿ ಕಪನಿ (ನಿಲುವಂಗಿ) ಧರಿಸುವುದಿಲ್ಲ?’ ಎಂಬ ಭಕ್ತರ ಪ್ರಶ್ನೆಗೆ ‘ಧರಿಸಿರುವ ಕಾವಿ ಪೇಟವೊಂದರ ಪಾವಿತ್ರ್ಯ ಉಳಿಸಿಕೊಳ್ಳುವುದೇ ಕಠಿಣವಾಗಿದೆ, ಇಡೀ ದೇಹಕ್ಕೆ ಕಾವಿ ಕಪನಿ ತೊಟ್ಟರೇ ಅದರ ನಿರ್ಮಲತೆ ಕಾಪಾಡಲು ಇನ್ನೆಂತಹ ವೃತ ಕೈಗೊಳ್ಳಲಿ. ಪರಿಶುದ್ಧವಿದ್ದರೇ ಮಾತ್ರ ಕಾವಿಗೆ ಮಹತ್ವ. ಇಲ್ಲದಿದ್ದರೇ ಅದು ಇನ್ನೊಂದು ವಸ್ತ್ರ ಹಾಗೂ ಬಣ್ಣವಷ್ಟೇ ಆದೀತು’ ಎಂದು ಕಾವಿಯ ಮಹತ್ವ ಹಾಗೂ ಜವಾಬ್ದಾರಿಯ ಬಗ್ಗೆ ತಿಳಿ ಹೇಳುತ್ತಿದ್ದರು.
ಶಿವಯೋಗಿಗಳು ತಮ್ಮ 61ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಭಕ್ತರು ಶಿವಯೋಗಿಗಳ ಗದ್ದುಗೆ ನಿರ್ಮಿಸಿದರು. ಇವತ್ತು ಕರ್ತೃ ಗದ್ದುಗೆ ಲಕ್ಷಾಂತರ ಜನರ ಶ್ರದ್ಧೆಯ ಕೇಂದ್ರವಾಗಿದ್ದು, ಭಕ್ತಿಯಿಂದ ನಮಿಸಿ, ನೆಮ್ಮದಿ, ಸ್ಫೂರ್ತಿ ಪಡೆಯುತ್ತಿದ್ದಾರೆ.

ADVERTISEMENT
ಚಿತ್ತರಗಿ ಚಿಜ್ಯೋತಿ ಮಹಾತಪಸ್ವಿ ಲಿಂ.ವಿಜಯ ಮಹಾಂತ ಶಿವಯೋಗಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.