
ರಬಕವಿ ಬನಹಟ್ಟಿ: ನೇಕಾರರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಸರ್ಕಾರ ಮಾತ್ರ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಸೋಮವಾರ ಮನವಿ ಪತ್ರವನ್ನು ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಸಲ್ಲಿಸಿ ಮಾತನಾಡಿದರು.
ಈಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಕಡೆಯಿಂದ ಆಗಮಿಸಿದ ನೇಕಾರರ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಆಗಮಿಸಿ ಅಧಿವೇಶನ ಮುಗಿದ 15 ದಿನಗಳ ಒಳಗಾಗಿ ಸಭೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಯಾವದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಜ 19ರಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಕೈಗೊಳ್ಳುವುದಾಗಿ ಶಿವಲಿಂಗ ಟಿರಕಿ ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಗೆ ₹1500 ಕೋಟಿ ಅನುದಾನ ನೀಡಬೇಕು. ನೇಕಾರರಿಗೂ ಕೂಡಾ ಕಟ್ಟಡ ಕಾರ್ಮಿಕರಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು. ನೇಕಾರರಿಗೆ ನಿವೇಶನ ಹಂಚಿಕೆಯಾಗಬೇಕು ಮತ್ತು ಕೆಎಚ್‌ಡಿಸಿ ಯನ್ನು ವಿದ್ಯುತ್ ಚಾಲಿತ ಮೂಲಭೂತ ಅಭಿವೃದ್ಧಿ ನಿಗಮದಲ್ಲಿ ವಿಲೀನಗೊಳಿಸುತ್ತಿದ್ದು, ನಾಲ್ಕೈದು ಮಗ್ಗಗಳನ್ನು ಹೊಂದಿದವರಿಗೆ ನಿರಂತರ ಉದ್ಯೋಗವನ್ನು ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಟಿರಕಿ ಅಗ್ರಹಿಸಿದರು.
ಎಸ್.ಎಸ್.ಉದಗಟ್ಟಿ, ಲಕ್ಕಪ್ಪ ಪವಾರ, ರಮೇಶ ಸೋರಗಾವಿ, ಮಲ್ಲಯ್ಯ ಮಠಪತಿ, ಗಂಗಪ್ಪ ಒಂಟಗೂಡಿ, ರಾಜೇಂದ್ರ ಶೇಡಬಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.