ADVERTISEMENT

ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್‌ ಕಡೆಯವರ ಗುಂಡು

ಆರ್. ಹರಿಶಂಕರ್
Published 2 ಜನವರಿ 2026, 20:32 IST
Last Updated 2 ಜನವರಿ 2026, 20:32 IST
ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಅವರ ಮೃತದೇಹದ ಬಳಿ ಶುಕ್ರವಾರ ದುಃಖತಪ್ತರಾಗಿ ನಿಂತಿರುವ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ.  
ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಅವರ ಮೃತದೇಹದ ಬಳಿ ಶುಕ್ರವಾರ ದುಃಖತಪ್ತರಾಗಿ ನಿಂತಿರುವ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ.     

ಬಳ್ಳಾರಿ: ‘ನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ (28) ಅವರ ದೇಹದಲ್ಲಿ ಪತ್ತೆಯಾದ ಗುಂಡು, ಬಳ್ಳಾರಿ ನಗರದ ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಕಡೆಯ ಖಾಸಗಿ ಅಂಗರಕ್ಷಕರದ್ದೇ’ ಎಂದು ಪೊಲೀಸ್‌ ಇಲಾಖೆ ನಿಕಟ ಮೂಲಗಳಿಂದ ಖಚಿತವಾಗಿದೆ. 

ರಾಜಶೇಖರ ಅವರ ಶವದ ಮರಣೋತ್ತರ ಪರೀಕ್ಷೆ ಬಳ್ಳಾರಿಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ಬಿಎಂಸಿಆರ್‌– ವಿಮ್ಸ್‌) ನಡೆಯಿತು. ‘ದೇಹದಲ್ಲಿ ‘12 ಎಂಎಂ–ಸಿಂಗಲ್‌ಬೋರ್‌’ನ ಗುಂಡಿನ ‘ವಾರ್ಡ್‌’ ಪತ್ತೆಯಾಗಿದೆ. ಅದು ಶಾಸಕ ನಾರಾ ಭರತ್‌ ರೆಡ್ಡಿ ಅವರ ಕಡೆಯವರ ಬಂದೂಕಿನ ಗುಂಡಿನ ಜೊತೆ ಹೊಂದಾಣಿಕೆ ಆಗುತ್ತಿದೆ’ ಎಂದು ಮರಣೋತ್ತರ ಪರೀಕ್ಷೆ ಕುರಿತು ಮಾಹಿತಿಯುಳ್ಳ ಅಧಿಕಾರಿಯೊಬ್ಬರು ತಿಳಿಸಿದರು. 

ವಿಧಿವಿಜ್ಞಾನ ತಜ್ಞರು ಹಿಂದಿನ ದಿನ ಘಟನಾ ಸ್ಥಳದಲ್ಲಿ ಸಂಗ್ರಹಿಸಿದ ವಸ್ತುಗಳು ಹಾಗೂ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ರಾಜಶೇಖರ ಅವರ ದೇಹದಲ್ಲಿ ಸಿಕ್ಕ ವಸ್ತುಗಳನ್ನು ನಾರಾ ಭರತ್‌ ರೆಡ್ಡಿ ಮತ್ತು ಆಪ್ತರ ಅಂಗರಕ್ಷಕರಿಂದ ಜಪ್ತಿ ಮಾಡಿಕೊಂಡ ಐದು ಬಂದೂಕುಗಳ ಗುಂಡುಗಳ ಜೊತೆ ಹೋಲಿಕೆ ಮಾಡಲಾಗಿದ್ದು, ಗುಂಡು ಭರತ್‌ ರೆಡ್ಡಿ ಆಪ್ತರ ಅಂಗರಕ್ಷಕರ ಬಂದೂಕಿನಿಂದಲೇ ಸಿಡಿದಿತ್ತು ಎಂಬುದು ದೃಢವಾಗಿದೆ ಎಂದು ಹೇಳಾಗಿದೆ.      

ADVERTISEMENT

ಇದಕ್ಕೆ ಪೂರಕ ಎಂಬಂತೆ ಭರತ್‌ ರೆಡ್ಡಿ ಅವರ ಖಾಸಗಿ ಅಂಗರಕ್ಷಕರು ಜನಾರ್ದನ ರೆಡ್ಡಿ ಮನೆಯತ್ತ ಮತ್ತು ಇತರ ಕಡೆ ಗುಂಡು ಹಾರಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.  

‘ಜನಾರ್ದನ ರೆಡ್ಡಿಯದ್ದೇ ಗುಂಡು‘: ರಾಜಶೇಖರ ಸಾವಿನ ಕುರಿತು ಅವರ ಸಹೋದರ ಈಶ್ವರ ರೆಡ್ಡಿ ಬ್ರೂಸ್‌ಪೇಟೆ ಠಾಣೆಯಲ್ಲಿ ದಾಖಲಿಸಿದ ಪ್ರಕರಣದಲ್ಲಿ (0001/2026), ‘ಖುದ್ದು ಶಾಸಕ ಜನಾರ್ದನ ರೆಡ್ಡಿ ಅವರೇ ಗುಂಡು ಹಾರಿಸಿ ಕೊಂದು, ನನ್ನ ತಂಟೆಗೆ ಬಂದವರಿಗೆ ಇದೇ ಗತಿ ಆಗುತ್ತದೆ. ಜೀವ ತೆಗೆದುಬಿಡ್ತೀನಿ ಎಂದು ಜೀವ ಬೆದರಿಕೆ ಹಾಕಿದರು’ ಎಂದು ಆರೋಪಿದ್ದಾರೆ. 

ಬಂದೂಕುಗಳು ಠಾಣೆಗೆ: ಘರ್ಷಣೆಯಲ್ಲಿ ಆದ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ನಾರಾ ಭರತ್‌ ರೆಡ್ಡಿ ಮತ್ತು ಅವರ ಆಪ್ತರ ಖಾಸಗಿ ಮತ್ತು ಸರ್ಕಾರಿ ಅಂಗರಕ್ಷಕರ ಐದು ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಅವುಗಳನ್ನು ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಇಟ್ಟಿದ್ದಾರೆ.

ಶವಯಾತ್ರೆಗೆ ಹೆಗಲು ಕೊಟ್ಟ ಶಾಸಕರು

ವಿಮ್ಸ್‌ನಲ್ಲಿ ಇರಿಸಲಾಗಿದ್ದ ರಾಜಶೇಖರ ಅವರ ಮೃತದೇಹವನ್ನು ಹುಸೇನ್‌ ನಗರದಲ್ಲಿ ಇರುವ ಮನೆಗೆ ಬಿಗಿ ಭದ್ರತೆಯಲ್ಲಿ ಒಯ್ಯಲಾಯಿತು. ಅಲ್ಲಿಗೆ ಬಂದ ಶಾಸಕರಾದ ನಾರಾ ಭರತ್‌ ರೆಡ್ಡಿ ಮತ್ತು ಜೆ.ಎನ್‌ ಗಣೇಶ್‌ ಅಂತಿಮ ದರ್ಶನ ಪಡೆದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. 

ಶಾಸಕರಾದ ನಾರಾ ಭರತ್‌ ರೆಡ್ಡಿ ಮತ್ತು ಜೆ.ಎನ್‌ ಗಣೇಶ್‌ ಶವಯಾತ್ರೆಗೆ ಹೆಗಲು ನೀಡಿದರು. ರೂಪನಗುಡಿ ರಸ್ತೆಯಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು. ‘ಸರ್ಕಾರದಿಂದ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸುವೆ. ವೈಯಕ್ತಿಕವಾಗಿಯೂ ಕೊಡುವೆ’  ಎಂದು ಭರತ್‌ ರೆಡ್ಡಿ ಹೇಳಿದರು. 

ದೊಡ್ಡ ಮಟ್ಟದಲ್ಲಿ ಶವಯಾತ್ರೆ ಮಾಡಲು ಕಾಂಗ್ರೆಸ್ಸಿಗರು ಆರಂಭದಲ್ಲಿ ಪ್ರಯತ್ನಿಸಿದ್ದರು. ಆದರೆ, ಅದಕ್ಕೆ ಅವಕಾಶ ನಿರಾಕರಿಸಲಾಯಿತು. ಅಂತಿಮವಾಗಿ ನಿರ್ದಿಷ್ಟ ಮಾರ್ಗದಲ್ಲಿ ಮಾತ್ರವೇ ಶವಯಾತ್ರೆ ಮಾಡಲು ಸೂಚಿಸಲಾಯಿತು. ಆ ಮಾರ್ಗದಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿತ್ತು.  

ಬಳ್ಳಾರಿ: ಸದ್ಯಕ್ಕೆ ‘ಶಾಂತ’

ಹೊಸ ವರ್ಷದ ಮೊದಲ ದಿನವೇ ಎರಡು ಘರ್ಷಣೆ ಕಂಡ ಬಳ್ಳಾರಿ ನಗರ ಸದ್ಯ ಶಾಂತ ಸ್ಥಿತಿಗೆ ಮರಳುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನಡುವೆ ತ್ವೇಷಮಯ ವಾತಾವರಣ ಇದೆ. ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ನಗರದ ಪ್ರಮುಖ ರಸ್ತೆ ವೃತ್ತಗಳಲ್ಲಿ ಮೀಸಲು ಪೊಲೀಸ್‌ ಪಡೆ ನಿಯೋಜನೆ ಮಾಡಲಾಗಿದೆ.  ಪರಿಸ್ಥಿತಿ ನಿಭಾಯಿಸಲೆಂದೇ ಎಡಿಜಿಪಿ ಹಿತೇಂದ್ರ ಐಜಿಪಿ ರವಿಕಾಂತೇಗೌಡ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಬಳ್ಳಾರಿ ಪೊಲೀಸ್ ವಲಯದ ವಿಜಯನಗರ ಕೊಪ್ಪಳ ರಾಯಚೂರಿನಿಂದ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. 

ಮೃತ ರಾಜಶೇಖರ ಒಡಲಲ್ಲಿ ಸಿಕ್ಕಿದ್ದು ಭರತ್ ರೆಡ್ಡಿ ಅಂಗರಕ್ಷಕರ ಗುಂಡು ಎಂಬುದು ಖಚಿತವಾಗಿದೆ. ಅದನ್ನು ಸಾಬೀತು ಮಾಡಲು ನಮ್ಮ ಬಳಿ ಸಾಕಷ್ಟು ಸಾಕ್ಷಿಗಳು ವೈಜ್ಞಾನಿಕ ಪುರಾವೆಗಳು ಇವೆ.
ಹಿರಿಯ ಪೊಲೀಸ್ ಅಧಿಕಾರಿ
ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಅವರ ಮೃತದೇಹಕ್ಕೆ ಶುಕ್ರವಾರ ನಮಿಸಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ.  

ಬಳ್ಳಾರಿ ಎಸ್‌ಪಿ ಪವನ್ ಅಮಾನತು

ಬೆಂಗಳೂರು: ಗುರುವಾರವಷ್ಟೇ (ಜ.1) ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಶುಕ್ರವಾರ ಅಮಾನತು ಮಾಡಲಾಗಿದೆ.  ಬುಧವಾರ ರಾತ್ರಿಯಷ್ಟೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬಿದ್ದಿತ್ತು. ನೆಜ್ಜೂರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದರು. ಅದೇ ದಿನ ಕಾಂಗ್ರೆಸ್ ಬಿಜೆಪಿ ನಾಯಕರ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿತ್ತು. ಈ ಬಗ್ಗೆ ವರದಿ ನೀಡುವಂತೆ ಬಳ್ಳಾರಿ ವಲಯದ ಡಿಐಜಿಪಿ ವರ್ತಿಕಾ ಕಟಿಯಾರ್‌ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೂಚಿಸಿದ್ದರು. ‘ಪರಿಸ್ಥಿತಿ ನಿಭಾಯಿಸುವಲ್ಲಿ ಹಾಗೂ ಹಿರಿಯ ಅಧಿಕಾರಿಗಳಿಗೆ ಘಟನೆಯ ಗಂಭೀರತೆ ಬಗ್ಗೆ ಮಾಹಿತಿ ನೀಡುವಲ್ಲಿ ಎಸ್‌ಪಿ ವಿಫಲರಾಗಿದ್ದಾರೆ’ ಎಂದು ವರ್ತಿಕಾ ಕಟಿಯಾರ್ ವರದಿ ನೀಡಿದ್ದರು. ಅದನ್ನು ಆಧರಿಸಿ ಅಮಾನತು ಮಾಡಲಾಗಿದೆ. ಚಿತ್ರದುರ್ಗ ಜಿಲ್ಲಾ ಎಸ್‌ಪಿ ರಂಜಿತ್ ಕುಮಾರ್ ಭಂಡಾರಿ ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಲಾಗಿದೆ.

ಜನಾರ್ದನ ರೆಡ್ಡಿ

4 ಎಫ್‌ಐಆರ್‌: ಎಲ್ಲದರಲ್ಲೂ ರೆಡ್ಡಿ ಎ1

ಬಳ್ಳಾರಿ: ಬಳ್ಳಾರಿಯ ಘರ್ಷಣೆ ಮತ್ತು ರಾಜಶೇಖರ ಸಾವಿಗೆ ಸಂಬಂಧಿಸಿದಂತೆ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು  ದಾಖಲಾಗಿವೆ.  ಪ್ರತ್ಯೇಕ ದೂರು ಆಧರಿಸಿ ಮೂರು (01/2026 02/2026 03/2026) ಎಫ್‌ಐಆರ್‌ ಮತ್ತು ಬಳ್ಳಾರಿ ನಗರ ಡಿವೈಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಅವರ ದೂರು ಆಧರಿಸಿ ಒಂದು ಸ್ವಯಂ ಪ್ರೇರಿತ ಪ್ರಕರಣವನ್ನು (04/2026) ಪೊಲೀಸರು ದಾಖಲಿಸಿಕೊಂಡಿದ್ದಾರೆ.

ರಾಜಶೇಖರನ ಕೊಲೆ ಜಾತಿ ನಿಂದನೆ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನೀಡಲಾದ ದೂರು ಆಧರಿಸಿ ಎಫ್‌ಐಆರ್‌ ದಾಖಲು ಆಗಿದೆ.  ಎಲ್ಲ ಪ್ರಕರಣಗಳಲ್ಲೂ ಶಾಸಕ ಜನಾರ್ದನ ರೆಡ್ಡಿ ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಕ್ರಮವಾಗಿ ಎ1 ಎ2 ಎ3 ಆರೋಪಿಗಳನ್ನಾಗಿ ಮಾಡಲಾಗಿದೆ. 

ಪೊಲೀಸರು ದಾಖಲು ಮಾಡಿರುವ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಹಚರರ ಜೊತೆಗೆ ಭರತ್‌ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.  ಆರೋಪವಿದ್ದರೂ ಭರತ್‌ ಮೇಲಿಲ್ಲ ಕೇಸು:  ಪೊಲೀಸರು ಸ್ವಯಂಪ್ರೇರಿತರಾಗಿ ದಾಖಲಿಸಿರುವ 04/2026ನೇ ಎಫ್‌ಐಆರ್‌ನಲ್ಲಿ ‘ಶಾಸಕ ನಾರಾ ಭರತ್‌ ರೆಡ್ಡಿ 1000 ಜನರ ಗುಂಪು ಕಟ್ಟಿಕೊಂಡು ಜನಾರ್ದನ ರೆಡ್ಡಿ ಮನೆ ಬಳಿಗೆ ಬಂದರು’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಆರೋಪಿಗಳ ಪಟ್ಟಿಯಲ್ಲಿ ಅವರ ಹೆಸರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.