ADVERTISEMENT

ಬಿಜೆಪಿ ಕಾರ್ಯಕಾರಿಣಿಗೂ ಮುನ್ನ ಕೇಸರಿಮಯಗೊಂಡ ಹೊಸಪೇಟೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 10:06 IST
Last Updated 22 ಜನವರಿ 2021, 10:06 IST
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಿಮಿತ್ತ ಹೊಸಪೇಟೆ ನಗರ ಸಂಪೂರ್ಣ ಕೇಸರಿಮಯಗೊಂಡಿದೆ. ನಗರದ ರೋಟರಿ ವೃತ್ತ ಶುಕ್ರವಾರ ಕೇಸರಿ ವರ್ಣದ ಬಂಟಿಂಗ್ಸ್‌, ತೋರಣದಿಂದ ಕಂಗೊಳಿಸಿತುಚಿತ್ರ: ಲವ
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಿಮಿತ್ತ ಹೊಸಪೇಟೆ ನಗರ ಸಂಪೂರ್ಣ ಕೇಸರಿಮಯಗೊಂಡಿದೆ. ನಗರದ ರೋಟರಿ ವೃತ್ತ ಶುಕ್ರವಾರ ಕೇಸರಿ ವರ್ಣದ ಬಂಟಿಂಗ್ಸ್‌, ತೋರಣದಿಂದ ಕಂಗೊಳಿಸಿತುಚಿತ್ರ: ಲವ   

ಹೊಸಪೇಟೆ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಭಾನುವಾರ (ಜ.24) ನಗರದಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನವೇ ನಗರ ಸಂಪೂರ್ಣ ಕೇಸರಿಮಯಗೊಂಡಿದೆ.

ನಗರದ ರೋಟರಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಪಕ್ಷದ ಧ್ವಜ, ಬಂಟಿಂಗ್ಸ್‌ ರಾರಾಜಿಸುತ್ತಿವೆ. ಪ್ರಮುಖ ರಸ್ತೆಗಳು ಇದಕ್ಕೆ ಹೊರತಾಗಿಲ್ಲ. ಕಾಲೇಜು ರಸ್ತೆ, ಬಸ್‌ ನಿಲ್ದಾಣ ರಸ್ತೆ, ಸ್ಟೇಶನ್‌ ರಸ್ತೆ, ಟಿ.ಬಿ. ಡ್ಯಾಂ ರಸ್ತೆಯ ಎರಡು ಕಡೆಗಳಲ್ಲೂ ಬಿಜೆಪಿ ಬಾವುಟಗಳು ಹಾರಾಡುತ್ತಿವೆ.

ಕಾರ್ಯಕ್ರಮ ನಡೆಯಲಿರುವ ಜ. 24ರಂದು ಬೆಳಿಗ್ಗೆ ಬೈಕ್‌ ರ್‍ಯಾಲಿ ಮೂಲಕ ಶಕ್ತಿ ಪ್ರದರ್ಶನಕ್ಕೂ ಬಿಜೆಪಿ ಸಿದ್ಧತೆ ನಡೆಸಿದೆ. ಸುಮಾರು 300ಕ್ಕೂ ಹೆಚ್ಚು ಜನ ಬೈಕ್‌ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಮಹಿಳಾ ಕಾರ್ಯಕರ್ತೆಯರು ಕೂಡ ದ್ವಿಚಕ್ರ ವಾಹನಗಳಲ್ಲಿ ಭಾಗವಹಿಸುವರು.

ADVERTISEMENT

‘ಅಂದು ಬೆಳಿಗ್ಗೆ 9ಕ್ಕೆ ನಗರದ ಅಮರಾವತಿ ಅತಿಥಿ ಗೃಹದಿಂದ ಸಮಾರಂಭ ನಡೆಯುವ ಪ್ರಿಯದರ್ಶಿನಿ ಪ್ರೈಡ್‌ ಹೋಟೆಲ್‌ ವರೆಗೆ ಬೈಕ್ ರ್‍ಯಾಲಿ ನಡೆಯಲಿದೆ. ಮಹಿಳಾ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷೆ ಡಿ. ಪುರಂದೇಶ್ವರಿ, ರಾಜ್ಯ ಘಟಕದ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳೆ ಅವರನ್ನು ರ್‍ಯಾಲಿ ಮೂಲಕ ವೇದಿಕೆ ವರೆಗೆ ಕರೆತರಲಾಗುವುದು’ ಎಂದು ಮಹಿಳಾ ಮೋರ್ಚಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌ ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ. ಮಹಿಳೆಯರ ಸಬಲೀಕರಣಕ್ಕೆ ಜಾರಿಗೆ ತಂದಿರುವ ಯೋಜನೆಗಳು, ಭವಿಷ್ಯದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಯಾವ್ಯಾವ ಕಾರ್ಯಕ್ರಮ ರೂಪಿಸಬೇಕು ಎನ್ನುವುದರ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ. ಪಕ್ಷ ಸಂಘಟನೆ ಕುರಿತು ಹಿರಿಯರು ಮಹಿಳಾ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ಮಾಡುವರು. ಕಾರ್ಯಕ್ರಮದ ಹಿಂದಿನ ದಿನ (ಜ.23) ಪಕ್ಷದ ಬೈಠಕ್ ಕೂಡ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿಗಳಾದ ಮೇಟಿ ಶಂಕರ್, ಜೀವರತ್ನಂ, ಮಾಧ್ಯಮ ಉಸ್ತುವಾರಿ ನಾಗರಾಜ, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಸುಗುಣಾ, ಮಂಡಲ ಅಧ್ಯಕ್ಷೆ ಭಾರತಿ ಪಾಟೀಲ, ಜ್ಯೋತಿ ಇದ್ದರು.

ಮೊದಲ ಬಾರಿಗೆ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಹಿಂದೆಂದಿಗಿಂತಲೂ ವಿಶೇಷವಾಗಿ ಮಾಡಲಾಗುವುದು.
–ಕವಿತಾ ಈಶ್ವರ್‌ ಸಿಂಗ್‌, ಜಿಲ್ಲಾ ಅಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.