
ಬಳ್ಳಾರಿ: ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ–2016ರ ವಿವಿಧ ನಿಬಂಧನೆಗಳ ಅನುಷ್ಠಾನಕ್ಕಾಗಿ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಮತ್ತು ಅವರ ಪುತ್ರರು ನ್ಯಾಯಾಂಗ ಹೋರಾಟ ಆರಂಭಿಸಿದ್ದಾರೆ.
ವೈ.ಎಂ. ಸತೀಶ್ ಮತ್ತು ಅವರ ಮಕ್ಕಳಾದ ವೈ. ಕಾರ್ತಿಕ್ ಹಾಗೂ ವೈ. ಕೌಶಿಕ್ ಅವರು ಭಾರತೀಯ ಸಂವಿಧಾನದ ಪರಿಚ್ಛೇದ 226ರಡಿ ರಾಜ್ಯ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.
‘ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ–2016ರ ಅನುಷ್ಠಾನದ ಕುರಿತು ಸಮಗ್ರ ಮಾಹಿತಿ ಕೋರಲಾಗಿದೆ. ಅಧಿಕಾರಿಗಳು ಅಂಗವಿಕಲರ ಸಮೀಕ್ಷೆಯನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದಲ್ಲಿರುವ ಅಂಗವಿಕಲರ ಪೈಕಿ ಸುಮಾರು ಶೇ 15 ಜನರಿಗೆ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿ ನೀಡಿಲ್ಲ’ ಎಂದು ಅರ್ಜಿಯಲ್ಲಿ ಗಮನಸೆಳೆಯಲಾಗಿದೆ.
‘ಅಂಗವಿಕಲರ ‘ರಿಹ್ಯಾಬಿಲಿಟೇಷನ್ ಕೌನ್ಸಿಲ್ ಆಫ್ ಇಂಡಿಯಾ ಕಾಯ್ದೆ-1992’ರ ಅನುಷ್ಠಾನ, ಶಿಕ್ಷಕ ತರಬೇತಿ ಕೇಂದ್ರಗಳನ್ನು ತೆರೆಯುವುದು, ಕೌಶಲ ತರಬೇತಿ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಶೇ 4ರಷ್ಟು ಕಡ್ಡಾಯ ಮೀಸಲಾತಿ, ಹುದ್ದೆಗಳನ್ನು ಕಾಯ್ದಿರಿಸುವುದು, ಮಾಸಾಶನವನ್ನು ₹10,000ಕ್ಕೆ ಹೆಚ್ಚಿಸುವುದು, ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಇರುವ ಆದಾಯದ ಮಿತಿ ರದ್ದು ಮಾಡುವುದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
‘ಅಂಗವಿಕಲರ ಆರೈಕೆದಾರರು–ಪೋಷಕರ ಮಾಸಾಶನ ಹೆಚ್ಚಿಸುವುದು, ರಾಜ್ಯ ಸರ್ಕಾರವು ಅಂಗವಿಕಲರಿಗೆ ಪ್ರತ್ಯೇಕವಾಗಿ ವಿಶೇಷ ನಿಧಿ ರಚಿಸುವುದು, ಪ್ರತಿ ಇಲಾಖೆಯ ಒಟ್ಟು ಅನುದಾನದಲ್ಲಿ ಶೇ 5ರಷ್ಟನ್ನು ಕಡ್ಡಾಯವಾಗಿ ಅಂಗವಿಕಲರಿಗೆ ಕಾಯ್ದಿರಿಸುವುದು, ಆಧುನಿಕ ತಂತ್ರಜ್ಞಾನದ ಸಲಕರಣೆಗಳು, ಯಂತ್ರಗಳು ಹಾಗೂ ಉಪಕರಣಗಳ ಖರೀದಿಸಲು ಅನುದಾನ ಹೆಚ್ಚಿಸುವುದು, ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ನೀಡಿ, ಅಗತ್ಯ ಸೌಲಭ್ಯ ಒದಗಿಸುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸೂಚನೆ ನೀಡಬೇಕು’ ಎಂದು ತಿಳಿಸಲಾಗಿದೆ.
ವರದಿ ಕೇಳಿದ ಹೈಕೋರ್ಟ್
ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠ ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ–2016 ಅನುಷ್ಠಾನದಲ್ಲಿ ಸೆಕ್ಷನ್ 17ರ ಆದೇಶವನ್ನು ಪಾಲಿಸದಿರುವ ಆರೋಪದ ಮೇಲೆ ರಾಜ್ಯ ಸರ್ಕಾರ ಮತ್ತು ಅಂಗವಿಕಲ ಇಲಾಖೆಯ ಆಯುಕ್ತರ ಕಚೇರಿಗೆ ನೋಟಿಸ್ ಜಾರಿ ಮಾಡಿದೆ. ವರದಿಯಲ್ಲಿ ಅರ್ಜಿದಾರರು ಕೇಳಿರುವ ಸಮಗ್ರ ಮಾಹಿತಿ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ ಸತೀಶ್ ತಿಳಿಸಿದ್ದಾರೆ.
ಅಂಗವಿಕಲರ ಹಕ್ಕುಗಳ ಕಾಯ್ದೆ ಅಸಮರ್ಪಕ ಅನುಷ್ಠಾನದ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಅಂಗವಿಕಲರ ಸೌಲಭ್ಯಗಳ ಬಗ್ಗೆ ಅವರಿಗೇ ಮಾಹಿತಿ ಇಲ್ಲ. ಇದಕ್ಕಾಗಿಯೇ ನ್ಯಾಯಾಂಗ ಹೋರಾಟ ಆರಂಭಿಸಲಾಗಿದೆ.–ವೈ. ಎಂ ಸತೀಶ್ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.