
ಬಳ್ಳಾರಿ: ‘ಸಮಾಜದ ಪ್ರತಿಯೊಬ್ಬರೂ ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸೋಣ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧುವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಗವಿಕಲರೂ ಸಹ ಸಾಧನೆ ಮಾಡಲು ಅರ್ಹರು. ವಿಜ್ಞಾನಿ ಸ್ಟೀಫೆನ್ ಹಾಕಿಂಗ್ ಅವರು ತಮ್ಮ ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಶಿಖರ ಏರಿದ್ದರು. ಅದರಂತೆ ಎಲ್ಲರೂ ಕಲೆ, ನೃತ್ಯ, ಆಟ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ, ಹಸನ್ಮುಖ-ಲವಲವಿಕೆಯಿಂದ ಜೀವನ ನಡೆಸಬೇಕು’ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ.ಗಾದೆಪ್ಪ ಮಾತನಾಡಿ, ‘ಸಮಾಜದಲ್ಲಿ ಅಂಗವಿಕಲರು ಸ್ವಾವಲಂಬಿಯಾಗಿ ಬದುಕುವ ಛಲ ಹೊಂದಿದ್ದಾರೆ. ಕರುಣೆಗಿಂತಲೂ ಮಿಗಿಲಾಗಿ ಸಮಾನತೆಯಿಂದ ಕಾಣಬೇಕು. ಮಹಾನಗರ ಪಾಲಿಕೆಯ ಆಯ-ವ್ಯಯ ಸಭೆಯನ್ನು ಡಿ.9 ಕ್ಕೆ ಏರ್ಪಡಿಸಲಾಗಿದ್ದು, ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಅಂಗವಿಕಲರು ಸಭೆಯಲ್ಲಿ ಭಾಗವಹಿಸಿ ತಮ್ಮ ಮನವಿಗಳು, ಬೇಡಿಕೆಗಳನ್ನು ಪ್ರಸ್ತಾಪಿಸಬಹುದು’ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ್, ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಮಹಮ್ಮದ್ ರಪೀ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಶಿಕ್ಷಣ ಇಲಾಖೆಯ ಲಕ್ಷ್ಮೀದೇವಿ ಮತ್ತಿತರರು ಇದ್ದರು.
‘ಗ್ರಂಥಾಲಯಗಳಲ್ಲಿ ಬ್ರೈಲ್ ಲಿಪಿ ಪುಸ್ತಕ’
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಮಾತನಾಡಿ ‘ಅಂಗವಿಕಲರಿಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಅಭಿವೃದ್ಧಿ ಅನುದಾನದಲ್ಲಿ ಶೇ 05 ರಷ್ಟು ಹಾಗೂ ಗ್ರಾಮ ಪಂಚಾಯತಿಯ 15ನೇ ಹಣಕಾಸು ಅನುದಾನದಲ್ಲಿ ಶೇ 05 ರಷ್ಟು ಮೀಸಲಾತಿ ಇದೆ ಎಂದು ತಿಳಿಸಿದರು. ಜಿಲ್ಲೆಯ 100 ಗ್ರಾಮ ಪಂಚಾಯಿತಿಗಳ ಪೈಕಿ 88 ಗ್ರಾಮಗಳಲ್ಲಿ ಗ್ರಾಮ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು ಅಂಗವಿಕಲರಿಗೆ ಬ್ರೈಲ್ ಲಿಪಿಯ ಪುಸ್ತಕಗಳನ್ನು ಗ್ರಾಂಥಲಯದಲ್ಲಿ ಇರಿಸಲಾಗಿದೆ. ಎನ್‌ಆರ್‌ಎಂಎಲ್ ಯೋಜನೆಯಡಿ ಅಂಗವಿಕಲರ ಸಂಘ ರಚನೆ ಮಾಡಲಾಗುತ್ತಿದ್ದು ಈ ಸಂಘದ ಮೂಲಕ ಜಿಲ್ಲಾ ಪಂಚಾಯತಿಯ ಅನುದಾನದಲ್ಲಿ ವಿಶೇಷಚೇತನರಿಗೆ ಸ್ವ-ಉದ್ಯೋಗ ಮಾಡಲು ಅವಕಾಶ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.