ಬಳ್ಳಾರಿ: ಭೂಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಇದೇ 7ರಂದು ಕುಡತಿನಿಯಿಂದ ಸಂಸದ ಮನೆಯವೆರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 8ರಂದು ಪ್ರತಿಭಟನೆ ನಡೆಯಲಿದೆ ಎಂದು ಭೂ ಸಂತ್ರಸ್ತ ಹೋರಾಟ ಸಮಿತಿ ಗೌರವಾಧ್ಯಕ್ಷ ಯು.ಬಸವರಾಜ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಡುತಿನಿ ಭಾಗದಲ್ಲಿ ವಶಪಡಿಸಿಕೊಂಡ ರೈತರ 12 ಸಾವಿರ ಎಕರೆ ಜಮೀನಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ರೈತರು ನಾನಾ ಹಂತದ ಹೋರಾಟಗಳನ್ನು ಮಾಡಿ ರೋಸಿ ಹೋಗಿದ್ದಾರೆ. ಮೂರು ಸರ್ಕಾರಗಳ ಜತೆಗೆ ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಸಂಡೂರು ಶಾಸಕರು, ಸಂಸದರು ಈ ಹೋರಾಟವನ್ನು ಗಂಭೀರವಾಗಿ ತೆಗೆದುಕೊಳ್ಳಲಿ ಎಂದು ನಾವು ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದರು.
‘ಆ. 7, 8ರಂದು, ಕುಡತಿನಿಯಿಂದ ಸಂಸದರ ಮನೆಯವೆರೆಗೆ ಪಾದಯಾತ್ರೆ, ಪ್ರತಿಭಟನೆ ಕೈಗೊಳ್ಳಲಾಗುವುದು. ನಂತರ ಜಿಲ್ಲೆಯ ಸಂಘ ಸಂಸ್ಥೆಗಳು, ನಾಗರಿಕರು, ವ್ಯಾಪಾರಿಗಳ ಸಹಕಾರ ಪಡೆದು ಅವರೊಂದಿಗೆ ಜಿಲ್ಲೆ ಬಂದ್ ಕರೆ ನೀಡಲಾಗುವುದು. ಅಲ್ಲಿಗೂ ಸರ್ಕಾರ ಮಣಿಯದಿದ್ದಲ್ಲಿ 2–3 ಸಾವಿರ ಜನರೊಂದಿಗೆ ಬೆಂಗಳೂರಿಗೆ ತೆರಳಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು, ಭೂ ಸಂತ್ರಸ್ತರಾದ ಸಿದ್ದಲಿಂಗಪ್ಪ, ಹನುಮಂತಪ್ಪ ಹರಗಿನಡೋಣಿ, ರಮೇಶ್ ಸೇರಿ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.