ಬಳ್ಳಾರಿ: ಗಣಪತಿ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ನಗರದಲ್ಲಿನ ವಿನಾಯಕ ಮಂಡಳಿಗಳು, ಸಮಿತಿಗಳು ಹಬ್ಬಕ್ಕೆ ಭರದ ಸಿದ್ಧತೆಯಲ್ಲಿ ತೊಡಗಿವೆ.
ಗಣಪನನ್ನು ಪ್ರತಿಷ್ಠಾಪಿಸುವ ಮಂಟಪಗಳ ನಿರ್ಮಾಣಕ್ಕೆಂದು 20 ದಿನಗಳಿಗೆ ಹಿಂದೆಯೇ ಕೆಲಸ ಕಾರ್ಯಗಳು ಶುರವಾಗಿದ್ದು, ಸತತವಾಗಿ ಸುರಿದ ಮಳೆಯು ಯಾವುದೇ ಅಡ್ಡಿಯುಂಟು ಮಾಡಿಲ್ಲ. ಹೀಗಾಗಿ ಬತ್ತದ ಉತ್ಸಾಹದೊಂದಿಗೆ ಉತ್ಸವಕ್ಕೆ ತಯಾರಿಗಳು ನಡೆಯುತ್ತಿವೆ.
ಈಗಾಗಲೇ ಗಣೇಶ ಮಹಾಮಂಡಳಿಗಳು ತಮ್ಮಲ್ಲಿಯೇ ವಿವಿಧ ಸಮಿತಿಗಳನ್ನು ರಚನೆ ಮಾಡಿಕೊಂಡು, ಜವಾಬ್ದಾರಿಗಳನ್ನು ಹಂಚಿಕೊಂಡಿವೆ. ಪ್ರಮುಖ ಗಣೇಶ ಸಮಿತಿಗಳ ಜತೆಗೆ ಜತೆಗೇ ಮಕ್ಕಳೂ ಗುಂಪು ಕಟ್ಟಿಕೊಂಡು ಗಣೇಶನನ್ನು ಕೂರಿಸಲು ಗಲ್ಲಿ ಗಲ್ಲಿಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಈಗಾಗಲೇ ಪೆಂಡಾಲ್ ನಿರ್ಮಿಸುವ ಕಾರ್ಯ ಭರದಿಂದ ನಡೆದಿದೆ.
ನಗರದ ಮೇದರವೋಣಿಯಲ್ಲಿ ಮೇದರ ಸಮಾಜದ ವತಿಯಿಂದ ಪುರಿ ಜಗನ್ನಾಥ ಮಂದಿರದ ರಥದ ಮಾದರಿಯಲ್ಲಿ ಈ ಬಾರಿ ಮಂಟಪ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ₹1.80 ಲಕ್ಷ ಖರ್ಚು ಮಾಡಲಾಗುತ್ತಿದೆ. ಇಲ್ಲಿನ ಮಂಟಪಕ್ಕೆ ಹೊರಗಿನಿಂದ ಯಾವುದೇ ವಸ್ತುಗಳನ್ನು ತರುವುದಿಲ್ಲ. ಬಿದಿರು ಕಟ್ಟಿಗೆಗಳಿಂದಲೇ ಮಂಟಪ ಸಿದ್ಧಪಡಿಸಲಾಗುತ್ತಿದೆ. ಒಟ್ಟಾರೆ ಉತ್ಸವಕ್ಕೆ 6–7 ಲಕ್ಷ ಖರ್ಚಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆ. ಹಿಂದಿನ ವರ್ಷಗಳಲ್ಲಿ ಧರ್ಮಸ್ಥಳ, ಅಯೋಧ್ಯೆ ಸೇರಿದಂತೆ 40 ರೀತಿಯ ಮಂಟಪಗಳನ್ನು ಮಾಡಲಾಗಿತ್ತು ಎಂದು ಉತ್ಸವ ಸಮಿತಿ ಹೇಳಿದೆ.
ಮೇದರ ಓಣಿಯಲ್ಲಿ ಐದು ದಿನ ಗಣಪತಿ ಕೂರಿಸಲಾಗುತ್ತದೆ. 4ನೇ ದಿನ ಅನ್ನಸಂತರ್ಪಣೆ ಮಾಡಲಾಗುತ್ತದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ನಗರದ ಡಾ. ರಾಜ್‌ಕುಮಾರ್ ರಸ್ತೆಯ, ಎಂ.ಜಿ ಪೆಟ್ರೋಲ್ ಬಂಕ್ ಸಮೀಪವೂ ಅದ್ಧೂರಿ ಗಣೇಶೋತ್ಸವ ಜರಗುತ್ತದೆ. ಹಿಂದಿನ ಬಾರಿ ಇಲ್ಲಿ ಅಯೋಧ್ಯೆ ಮಾದರಿಯ ಮಂಟಪ ನಿರ್ಮಾಣ ಮಾಡಿ, ಬಾಲಕೃಷ್ಣನ ಮಾದರಿಯ ಗಣೇಶನನ್ನೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಬಾರಿ ಅನಂತಪದ್ಮನಾಭ ದೇಗುಲದ ಮಾದರಿಯ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದು ಗಣೇಶ ಸಮಿತಿಯ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನು ಸ್ಥಳೀಯ ಆಡಳಿತವೇನೋ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸದಂತೆ ಹೇಳಿದೆಯಾದರೂ, ನಗರದೆಲ್ಲೆಡೆ ಪಿಒಪಿ ಗಣೇಶನ ಮೂರ್ತಿಗಳು ಈಗಾಗಲೇ ರೂಪ ಪಡೆದು, ಮಾರಾಟಕ್ಕೆ ಸಜ್ಜಾಗಿವೆ.
ಗೌರಿ ಗಣೇಶ ಹಬ್ಬವು ಭಕ್ತಿ ಭಾವನೆ ಪೂಜೆಯ ಹಬ್ಬ. ವಾಯು ಜಲ ಶಬ್ದ ಮಣ್ಣು ಮಾಲಿನ್ಯ ರಹಿತವಾಗಿ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು.ಟಿ.ಎಂ.ಸಿದ್ದೇಶ್ವರ ಬಾಬು ಪರಿಸರ ಅಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿ
ಪರಿಸರ ಸ್ನೇಹಿ ಗಣಪ
ತಯಾರಿಸುವ ಸತ್ಯ ಆರ್ಟ್ಸ್ ನಗರದ ಮಿಲ್ಲರ್ ಪೇಟೆಯಲ್ಲಿರುವ ಕಲಾವಿದ ಸತ್ಯನಾರಾಯಣ ಅವರ ಸತ್ಯ ಆರ್ಟ್ಸ್‌ನಲ್ಲಿ ಮಣ್ಣಿನಿಂದ ಮಾತ್ರವೇ ಗಣಪತಿ ತಯಾರು ಮಾಡುತ್ತಿದ್ದು ಜನಪ್ರಿಯತೆ ಗಳಸಿಕೊಂಡಿದೆ. ಇಲ್ಲಿ ಅತೀ ಸೀಮಿತ ಆರ್ಡ್‌ರ್‌ಗಳನ್ನು ಪಡೆದು ಮೂರ್ತಿಗಳನ್ನು ತಯಾರಿಸಿಕೊಡಲಾಗುತ್ತದೆ. ಗಣಪನ ತಯಾರಿಕೆಗಾಗಿ ಕೊಟ್ಟೂರಿನಿಂದ ಜೇಡಿ ಮಣ್ಣು ತರಲಾಗುತ್ತದೆ. ಬಳ್ಳಾರಿಯ ಮಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುವುದರಿಂದ ಮೂರ್ತಿಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹೀಗಾಗಿಯೇ ಕೊಟ್ಟೂರಿನಿಂದಲೇ ಮಣ್ಣು ತರಲಾಗುತ್ತದೆ ಎಂದು ಸತ್ಯ ಆರ್ಟ್ಸ್‌ನ ಸತ್ಯನಾರಾಯಣ ಹೇಳುತ್ತಾರೆ. ‘ಅತ್ಯಂತ ಸವಾಲಿನಲ್ಲಿ ವೈಜ್ಞಾನಿಕವಾಗಿ ಇಲ್ಲಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ ಎಂದು ಹೇಳುತ್ತಾರೆ’ ಸತ್ಯ ಆರ್ಟ್ಸ್‌ನ ಕಲಾವಿದ ಗುರುರಾಜ್.
ಹಣ ಸಂಗ್ರಹಕ್ಕೆ ಇಳಿದ ಮಕ್ಕಳು
ಸಮಿತಿ ಮಂಡಳಿಗಳನ್ನು ಮಾಡಿಕೊಂಡಿರುವ ಹಿರಿಯರು ಯುವಕರು ತಮ್ಮ ಕೈಯಿಂದ ಹಣ ಹಾಕಿ ಪ್ರಾಯೋಜಕರ ಮೂಲಕ ಉತ್ಸವ ಮಾಡುತಿದ್ದಾರೆ. ಆದರೆ ಗಣೇಶನನ್ನು ಕೂರಿಸುವ ಕ್ರೇಜ್ ಇದ್ದರೂ ಹಣವಿಲ್ಲದ ಶಾಲಾ ಮಕ್ಕಳು ಮಾತ್ರ ನಗರದ ಪ್ರಮುಖ ರಸ್ತೆಗಳಲ್ಲಿ ಡಬ್ಬಗಳನ್ನು ಹಿಡಿದು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಮನೆ ಮನೆಗಳಲ್ಲೂ ಕಲೆಕ್ಷನ್ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ದೇಣಿಗೆ ಸಂಗ್ರಹಿಸುವ ವೇಳೆ ಧಾರ–ಹಗ್ಗ ಹಿಡಿದು ಅಡ್ಡ ಹಾಕುವುದು ಕಟ್ಟಿಗೆಗಳನ್ನು ಅಡ್ಡ ಇಡುವುದು ಮಾಡುತ್ತಿದ್ದಾರೆ. ವೇಗವಾಗಿ ಬರುವ ವಾಹನಗಳಿಗೆ ಅಡ್ಡ ನಿಲ್ಲುತ್ತಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪೋಷಕರು ಪೊಲೀಸರು ಮಕ್ಕಳಿಗೆ ತಿಳಿಹೇಳಿ ರಸ್ತೆಗಳಲ್ಲಿ ದೇಣಿಗೆ ಎತ್ತದಂತೆ ಎಚ್ಚರಿಸಬೇಕು ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.