
ಹರಪನಹಳ್ಳಿ: ನಗರಸಭೆಯಾಗಿ ಅಂತಿಮ ಅಧಿಸೂಚನೆ ಪಡೆದಿರುವ ಇಲ್ಲಿಯ ಪುರಸಭೆಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ. ಇನ್ನೊಂದೆಡೆ ಪುರಸಭೆ ಅಧ್ಯಕ್ಷೆ, ಸದಸ್ಯರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದರಿಂದಾಗಿ ನೂತನ ನಗರಸಭೆಗೆ ಆಡಳಿತಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎನ್ನುವ ಗೊಂದಲ ಸೃಷ್ಟಿಯಾಗಿದೆ.
ನ.3ರಂದು ಹೈಕೋರ್ಟ್ ಮೊರೆ ಹೋಗಿರುವ ಪುರಸಭೆ ಅಧ್ಯಕ್ಷೆ ಪಾತೀಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್, ಸದಸ್ಯರಾದ ಅಬ್ದುಲ್ ರೆಹಮಾನ್, ದಾದಾಪೀರ ಅವರು, ಐದು ವರ್ಷದ ಆಡಳಿತ ಮಂಡಳಿಗೆ ಮೊದಲ ಅವಧಿಯಲ್ಲಿ ಎರಡುವರೆ ವರ್ಷ ಅಧಿಕಾರ ಸಿಕ್ಕಿದೆ. ಅದರೆ ಎರಡನೇ ಅವಧಿಯಲ್ಲಿ ಆಡಳಿತಾಧಿಕಾರಿ ನೇಮಕ ಅವಧಿ ಹೊರತುಪಡಿಸಿ ಕೇವಲ ಒಂದು ವರ್ಷ ಮಾತ್ರ ಅವಕಾಶ ಸಿಕ್ಕಿದ್ದು, ನಮಗೆ ಅನ್ಯಾಯವಾಗಿದೆ. ಇನ್ನೂ 16 ತಿಂಗಳು ಆಡಳಿತ ಅವಧಿ ಮುಂದುವರೆಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ತೀರ್ಪು ಬರುವ ತನಕ ಆಡಳಿತಾಧಿಕಾರಿ ನೇಮಿಸಬಾರದು, ಅರ್ಜಿದಾರರು ಯಾವುದೇ ಹೊಸ ನೀತಿ, ಯೋಜನೆಗೆ ಮಂಜೂರಾತಿ ನೀಡಬಾರದು. ಆರ್ಥಿಕ ನಿರ್ಧಾರ ತೆಗೆದುಕೊಳ್ಳಬಾರದು ಎನ್ನುವ ನಿರ್ಬಂಧ ಹೇರಿ ಮಧ್ಯಂತರ ತಡೆ ನೀಡಿದೆ.
ಆದರೆ ಇದರ ನಡುವೆ ರಾಜ್ಯ ಸರ್ಕಾರ ನ.19ರಂದು ಪ್ರಕಟಿಸಿದ ವಿಶೇಷ ರಾಜ್ಯಪತ್ರದಲ್ಲಿ ಹರಪನಹಳ್ಳಿ ಪುರಸಭೆ ಅವಧಿ ನ.8ಕ್ಕೆ ಮುಕ್ತಾಯಗೊಂಡಿದ್ದು, ಹರಪನಹಳ್ಳಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಯನ್ನು ಆಡಳಿತ ಅಧಿಕಾರಿಯನ್ನಾಗಿ ನೇಮಿಸಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಅವರು ಆದೇಶಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ನ.20ರಂದು ಸರ್ಕಾರ ಅಂತಿಮವಾಗಿ ಹರಪನಹಳ್ಳಿಯನ್ನು ಸಣ್ಣ ನಗರ ಪ್ರದೇಶವೆಂದು ಉದ್ಘೋಷಿಸಿ, ಇಲ್ಲಿಯ ಪುರಸಭೆಯನ್ನು ಹರಪನಹಳ್ಳಿ ನಗರಸಭೆಯ ಪ್ರದೇಶವೆಂದು ಪದನಾಮೀಕರಿಸಿ, ಸರಹದ್ದು ನಿಗದಿಪಡಿಸಿದೆ. ಕೋರ್ಟ್‍ನಿಂದ ಅರ್ಜಿದಾರರ ಪರ ತೀರ್ಪು ಬಂದರೆ ಈಗಿನ ಆಡಳಿತ ಮಂಡಳಿ ಅವಧಿ ಮುಂದುವರೆಯುತ್ತದೆ. ಇಲ್ಲದಿದ್ದರೆ ಆಡಳಿತಾಧಿಕಾರಿ ಯಾರೆಂಬುದನ್ನು ಸರ್ಕಾರ ಮತ್ತೊಮ್ಮೆ ನಿರ್ಧರಿಸಬೇಕಿದೆ.
ಪ್ರಭಾರಿ ಪೌರಾಯುಕ್ತೆ ರೇಣುಕ ದೇಸಾಯಿ ಮಾತನಾಡಿ, ನ್ಯಾಯಾಲಯದಲ್ಲಿ ಆದೇಶ ಆಗುವವರೆಗೆ ಆಡಳಿತ ಮಂಡಳಿ ಸಭೆ ಮಾಡುವಂತಿಲ್ಲ, ಯಾವುದೇ ಕಡತ, ಚೆಕ್‍ಗಳಿಗೆ ಸಹಿ ಪಡೆಯುವಾಗಿಲ್ಲ. ಹೊಸ ಯೋಜನೆಗೆ ಮುಂಜೂರಾತಿ ನೀಡುವಂತಿಲ್ಲ ಹಾಗೂ ಯಾವುದೇ ಆರ್ಥಿಕ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮಾಹಿತಿ ನೀಡಿದರು.
ಹರಪನಹಳ್ಳಿ ಪುರಸಭೆಗೆ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ ಆದರೆ ಜಿಲ್ಲಾಧಿಕಾರಿಯಿಂದ ಇನ್ನೂ ಆದೇಶವಾಗಿಲ್ಲ. ಈಗ ನಗರಸಭೆಯಾಗಿ ಮೇಲ್ದರ್ಜೆ ಪಡೆದಿರುವ ಕಾರಣ ಹೈಕೋರ್ಟ್ ತೀರ್ಪು ಬಳಿಕ ಸ್ಪಷ್ಟನೆ ಸಿಗಲಿದೆ.ರೇಣುಕಾ ಎಸ್.ದೇಸಾಯಿ ಪ್ರಭಾರಿ ಪೌರಾಯುಕ್ತೆ ನಗರಸಭೆ
ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ ಆದರೆ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಜಿಲ್ಲಾಧಿಕಾರಿಗಳ ನಿರ್ದೇಶನ ಕಾಯುತ್ತಿದ್ದೇವೆ.ಚಿದಾನಂದ ಗುರುಸ್ವಾಮಿ ಉಪವಿಬಾಗಾಧಿಕಾರಿ ಹರಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.