ADVERTISEMENT

ವಾಣಿಜ್ಯ ಒಪ್ಪಂದದಿಂದ ರೈತರ ಬದುಕು ನಾಶ: ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಆತಂಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:57 IST
Last Updated 26 ಫೆಬ್ರುವರಿ 2026, 6:57 IST
ಭಾರತ–ಅಮೆರಿಕ ವಾಣಿಜ್ಯ ವ್ಯಾಪಾರ ಒಪ್ಪಂದ ಮತ್ತು ಅದರಿಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲೆ ಆಗಲಿರುವ ಪರಿಣಾಮಗಳ ಕುರಿತು ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಬುಧವಾರ ‘ರೈತ ಸಂಘ’ ಹಮ್ಮಿಕೊಂಡಿದ್ದ ಜಾಗೃತಿ ಅಧಿವೇಶನವನ್ನು ಗಣ್ಯರು ಉದ್ಘಾಟಿಸಿದರು   
ಭಾರತ–ಅಮೆರಿಕ ವಾಣಿಜ್ಯ ವ್ಯಾಪಾರ ಒಪ್ಪಂದ ಮತ್ತು ಅದರಿಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲೆ ಆಗಲಿರುವ ಪರಿಣಾಮಗಳ ಕುರಿತು ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಬುಧವಾರ ‘ರೈತ ಸಂಘ’ ಹಮ್ಮಿಕೊಂಡಿದ್ದ ಜಾಗೃತಿ ಅಧಿವೇಶನವನ್ನು ಗಣ್ಯರು ಉದ್ಘಾಟಿಸಿದರು      

ಬಳ್ಳಾರಿ: ‘ಭಾರತ ಮತ್ತು ಅಮೆರಿಕ ನಡುವೆ ನಡೆದಿರುವ ವಾಣಿಜ್ಯ ಒಪ್ಪಂದವು ರೈತರ ಬದುಕನ್ನು ನಾಶಗೊಳಿಸಲಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. 

ವಾಣಿಜ್ಯ ವ್ಯಾಪಾರ ಒಪ್ಪಂದ ಮತ್ತು ಅದರಿಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲೆ ಆಗಲಿರುವ ಪರಿಣಾಮಗಳ ಕುರಿತು ‘ರೈತ ಸಂಘ’ದಿಂದ ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಅಧಿವೇಶನದಲ್ಲಿ ಅವರು ಮಾತನಾಡಿದರು.

‘ಈಗಾಗಲೆ ರಾಜ್ಯದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರೈತರಿಂದ ಆರಿಸಿ ಹೋದ ಜನಪ್ರತಿನಿಧಿಗಳು ರೈತರನ್ನೇ ಅಪಮಾನ ಮಾಡುವಂತೆ ಮಾತನಾಡುತ್ತಿದ್ದಾರೆ. ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದ್ದರಿಂದ ದೇವನಹಳ್ಳಿಯ 1700 ಎಕರೆ ಕೃಷಿ ಭೂಮಿ ಉಳಿಯಿತು. ದೇಶದಲ್ಲಿ ಇತ್ತೀಚಿಗೆ ರೈತರಿಗೆ ಮಾರಕವಾಗುವ ವಿದೇಶಿ ನೀತಿಯ ಹೆಸರಿನಲ್ಲಿ ಅಮೆರಿಕ ಮಧ್ಯೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ರೈತರ ಬದುಕನ್ನೇ ನಾಶಗೊಳಿಸುವಂತೆ ಮಾಡಿದೆ’ ಎಂದರು. 

ADVERTISEMENT

ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ‘ಭಾರತ ಕೃಷಿ ಪ್ರಧಾನ ದೇಶ. ವ್ಯಾಪಾರದ ಹೆಸರಿನಲ್ಲಿ ಬಂದವರು ಇಲ್ಲಿ ಹಲವು ವರ್ಷ ಆಳಿದರು. ಅವರನ್ನು ಹೊರಹಾಕಲು ದೀರ್ಘ ಹೋರಾಟಗಳು ನಡೆದವು. ಈಗ ವಿದೇಶಿ ಒಪ್ಪಂದದ ಹೆಸರಲ್ಲಿ ಭಾರತ–ಅಮೆರಿಕ ಮಧ್ಯೆ ನಡೆದಿರುವ ಒಪ್ಪಂದ ಮತ್ತೊಮ್ಮೆ ಇಡೀ ಭಾರತವನ್ನು ಗುಲಾಮಗಿರಿಯ ಕಡೆಗೆ ಹೋಗುವಂತೆ ಮಾಡಿದೆ’ ಎಂದರು.

ರೈತ ಸಂಘದ ಗೌರವಾಧ್ಯಕ್ಷ ಸಾ. ರಘುನಾಥ ಮಾತನಾಡಿ ‘ಮೂರು ಕರಾಳ ಕೃಷಿ ಕಾಯ್ದೆ ವಿರೋಧಿಸಿ ನಡೆದ ಚಳವಳಿಯಂತೆ ‘ಭಾರತ–ಅಮೆರಿಕ ವಾಣಿಜ್ಯ ಒಪ್ಪಂದ’ವನ್ನೂ ವಿರೋಧಿಸಬೇಕು. ಎಂಥಹದ್ದೇ ಪರಿಸ್ಥಿತಿಯಲ್ಲೂ ರೈತ ಕುಲವನ್ನು ರಕ್ಷಿಸಿಕೊಳ್ಳುವ ಸಮಯ ಇದಾಗಿದೆ. ರೈತ ದಿವಾಳಿಯಾದರೆ ಇಡೀ ದೇಶವೇ ದಿವಾಳಿಯಾದಂತೆ. ಸರ್ಕಾರಗಳು ಇದನ್ನು ಅರ್ಥಮಾಡಿಕೊಳ್ಳಬೇಕಿದೆ’ ಎಂದರು.

ಸರಳದೇವಿ ಕಾಲೇಜಿನ ಸಹ ಪ್ರಾಧ್ಯಾಪಕರದ ಹುಚ್ಚುಸಾಬ್‌, ಪ್ರೊ ಟಿ ಆರ್‌ ಚಂದ್ರಶೇಖರ,  ಟಿ.ಜಿ.ವಿಠಲ್‌  ಮತ್ತಿತರರು ಮಾತನಾಡಿದರು. 

ಲೆಕ್ಕಪರಿಶೋಧಕರಾದ ಸಿರಿಗೆರೆ ಪನ್ನರಾಜ್‌, ಪ್ರಾಧ್ಯಾಪಕ ದಸ್ತಗೀರ ಸಾಬ್‌ ದಿನ್ನಿ,  ಬೈಲೂರುಶ್ರೀಕಾಂತ ರೆಡ್ಡಿ,ನಾಗರಾಜ ಜಿಕೆ, ಶ್ರೀಶೈಲ ಆಲದಳ್ಳಿ, ಶರಣಗೌಡ ಪಾಟೀಲ್‌, ಅರವಿಂದ ಸ್ವಾಮಿ, ಶಿವಕುಮಾರ್‌, ಗೋಪಾಲ ರೆಡ್ಡಿ, ಬಸವರಾಜ್‌, ಈರಣ್ಣ, ಸೋಮಪ್ಪ, ಲೇಪಾಕ್ಷಿ, ಓಂಕಾರಿ, ಸಂಜೀವರೆಡ್ಡಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.