ADVERTISEMENT

ತೆಕ್ಕಲಕೋಟೆ: ಸಾವಯವ ಕೃಷಿಗೆ 'ಡ್ರೋಣ್' ನೆರವು

ಪ್ರಯೋಗಶೀಲ ರೈತ ನಂದೀಶರ ಔಷಧಿ ಸಿಂಪರಣೆ ವಿಧಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:43 IST
Last Updated 24 ನವೆಂಬರ್ 2025, 5:43 IST
ತೆಕ್ಕಲಕೋಟೆ ಸಮೀಪದ ಬೈರಾಪುಣ ಗ್ರಾಮದ ರೈತ ಬಿ.ಎಂ ವೀರೇಶ ತಮ್ಮ ತೊಗರಿ ಬೆಳೆಗೆ ಸಾವಯವ ಔಷಧಿ ಸಿಂಪಡಿಸಲು ಡ್ರೋನ್ ಬಳಸಿದರು
ತೆಕ್ಕಲಕೋಟೆ ಸಮೀಪದ ಬೈರಾಪುಣ ಗ್ರಾಮದ ರೈತ ಬಿ.ಎಂ ವೀರೇಶ ತಮ್ಮ ತೊಗರಿ ಬೆಳೆಗೆ ಸಾವಯವ ಔಷಧಿ ಸಿಂಪಡಿಸಲು ಡ್ರೋನ್ ಬಳಸಿದರು   

ತೆಕ್ಕಲಕೋಟೆ: ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಲು ರೈತರೊಬ್ಬರು ಡ್ರೋನ್ ಮೊರೆ ಹೋಗಿದ್ದಾರೆ.

ತೆಕ್ಕಲಕೋಟೆ ಸಮೀಪದ ಭೈರಾಪುರ ಗ್ರಾಮದ ರೈತ ಬಿ.ಎಂ ಈರಪ್ಪಯ್ಯ ಅವರ ಮಗ ಬಿ.ಎಂ ವೀರೇಶ ತಂದೆಯ ಹಾದಿಯಲ್ಲಿ ನೈಸರ್ಗಿಕ ಸಾವಯವ ಕೃಷಿ ಕೈಗೊಂಡು ಯಶಸ್ವಿಯಾಗುವ ಮೂಲಕ ಸೈ ಎನಿಸಿಕೊಂಡಿದ್ದು, ಈಗ ತಂತ್ರಜ್ಞಾನ ಅಳವಡಿಕೆಯತ್ತ ಹೆಜ್ಜೆ ಇಟ್ಟಿದ್ದಾರೆ. 

ಸಾವಯವ ಪದ್ಧತಿಯಲ್ಲಿ ತೊಗರಿ ಬೆಳೆ ಬೆಳೆದಿರುವುದರಿಂದ ಬೆಳೆಯು ಉತ್ತಮವಾಗಿ ಬಂದಿದ್ದು ಎತ್ತರವಾಗಿ ಬೆಳೆದಿದೆ. ಹೀಗಾಗಿ ಕಾರ್ಮಿಕರಿಂದ ಔಷಧ ಸಿಂಪರಣೆ ಮಾಡಲು ಆಗುವುದಿಲ್ಲ. ಅದಲ್ಲದೆ ಕಾರ್ಮಿಕರ ಕೊರತೆಯು ಇರುವುದರಿಂದ ಔಷಧಿ ಸಿಂಪರಣೆ ಡ್ರೋನ್‌ ಬಳಸಲಾಯಿತು ಎಂದು ವೀರೇಶ ತಿಳಿಸಿದರು.

ADVERTISEMENT

ಡ್ರೋನ್ ಬಾಡಿಗೆ ಎಕರೆಗೆ ₹350 ರಂತೆ 5 ಎಕರೆಗೆ ₹1750 ಖರ್ಚು ಮಾಡಲಾಗಿದೆ. ಒಂದೇ ತಾಸಿನಲ್ಲಿ ಐದು ಎಕರೆ ಔಷಧಿ ಸಿಂಪರಣೆ ಮುಕ್ತಾಯಗೊಂಡಿದೆ. ಇದನ್ನೇ ಆಳುಗಳ ಮೂಲಕ ಮಾಡಿದ್ದಲ್ಲಿ ಕನಿಷ್ಟ 4 ಕೂಲಿ ಆಳು ಹಾಗೂ ಒಂದು ದಿನದ ಸಮಯ ಅಲ್ಲದೆ ₹2000 ಕೂಲಿ ಆಗುತ್ತದೆ.

ಡೋನ್ ಮೂಲಕ ಔಷಧಿ ಸಿಂಪರಣೆ ಮಾಡುವುದರಿಂದ ಔಷಧಿಯು ಸಮಪ್ರಮಾಣದಲ್ಲಿ ಎಲ್ಲೆಡೆ ಹರಡುತ್ತದೆ ಅಲ್ಲದೆ ಸಮಯದ ಉಳಿತಾಯವೂ ಆಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಖರ್ಚು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವೀರೇಶ.

ಸಾವಯವ ಕ್ರಿಮಿನಾಶಕ ಬಳಕೆ 
ಬಂಡ್ರಾಳು ಗ್ರಾಮದ ತಮ್ಮ 5ಎಕರೆ ತೊಗರಿ ಬೆಳೆಗೆ ಔಷಧಿಗಾಗಿ 3 ಕೆಜಿ ಹಸಿ ಶುಂಠಿ 3 ಕೆಜಿ ಬೆಳ್ಳುಳ್ಳಿ 3 ಕೆಜಿ ಹಸಿಮೆಣಸಿನ ಕಾಯಿ ಹಾಗೂ 3 ಕೆಜಿ ಉಳ್ಳಾಗಡ್ಡಿ ಇವುಗಳ ಮಿಶ್ರಣವನ್ನು ಮಾಡಿ 10 ಲೀಟರ್ ಗೋಮೂತ್ರದಲ್ಲಿ ನೆನೆ ಹಾಕಿ ಎಕರೆಗೆ 2.5 ಲೀಟರ್ ನಂತೆ ಡ್ರೋನ್ ಬಳಸಿ ಔಷಧಿ ಸಿಂಪರಣೆ ಮಾಡಲಾಗಿದೆ.  ಔಷಧಿ ತಯಾರಿಕೆಗಾಗಿ ಕೇವಲ ₹400 ಖರ್ಚಾಗಿದೆ. ರಾಸಾಯನಿಕ ಗೊಬ್ಬರ ಕನಿಷ್ಟ 5 ರಿಂದ 6 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ರೈತ ವೀರೇಶ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.