ADVERTISEMENT

ಹೊಸಪೇಟೆ ಪಾಲಿಕೆಯ ಕರಡು ಪ್ರಸ್ತಾವದಲ್ಲಿ ಕಮಲಾಪುರ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 14:53 IST
Last Updated 16 ಸೆಪ್ಟೆಂಬರ್ 2021, 14:53 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ತುರ್ತು ಸಾಮಾನ್ಯ ಸಭೆ ಗುರುವಾರ ನಡೆಯಿತು. ಮಹಾನಗರ ಪಾಲಿಕೆ ರಚನೆಯ ಕರಡು ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರಿಸಬಾರದು ಎಂಬ ನಿರ್ಣಯಕ್ಕೆ ಎಲ್ಲ ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ತುರ್ತು ಸಾಮಾನ್ಯ ಸಭೆ ಗುರುವಾರ ನಡೆಯಿತು. ಮಹಾನಗರ ಪಾಲಿಕೆ ರಚನೆಯ ಕರಡು ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರಿಸಬಾರದು ಎಂಬ ನಿರ್ಣಯಕ್ಕೆ ಎಲ್ಲ ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು   

ಹೊಸಪೇಟೆ (ವಿಜಯನಗರ): ಉದ್ದೇಶಿತ ಹೊಸಪೇಟೆ ಮಹಾನಗರ ಪಾಲಿಕೆ ರಚನೆಗೆ ಸಂಬಂಧಿಸಿದ ಕರಡು ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರಿಸಬಾರದು ಎಂದು ಗುರುವಾರ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಪಂಚಾಯಿತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಒಟ್ಟು 20 ಸದಸ್ಯರ ಪೈಕಿ 18 ಜನ ಪಾಲ್ಗೊಂಡಿದ್ದರು. ಇಬ್ಬರು ಅನಾರೋಗ್ಯದಿಂದ ಸಭೆಗೆ ಗೈರಾಗಿದ್ದರು ಎಂದು ತಿಳಿದು ಬಂದಿದೆ.

‘ಪಾಲಿಕೆ ರಚನೆಯ ಕರಡು ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರ್ಪಡೆಗೊಂಡು ಅದು ಅಂಗೀಕಾರಗೊಂಡರೆ ಪಂಚಾಯಿತಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಭಾರ ಬೀಳುತ್ತದೆ. ಪಾಲಿಕೆ ವ್ಯಾಪ್ತಿಗೆ ಸೇರಿದರೆ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಈಗಾಗಲೇ ಪಟ್ಟಣದಲ್ಲಿ ಸಭೆ ಸೇರಿದ ವಿವಿಧ ಸಂಘಟನೆಗಳು ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಿವೆ. ಜನಪ್ರತಿನಿಧಿಗಳಾದ ನಾವು ಅವರ ಭಾವನೆಗೆ ಸ್ಪಂದಿಸುವ ಅಗತ್ಯವಿದೆ’ ಎಂದು ಸೈಯದ್‌ ಅಮಾನುಲ್ಲಾ ಹೇಳಿದರು.

ADVERTISEMENT

ಅದಕ್ಕೆ ಎಲ್ಲಾ ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು. ಬಳಿಕ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿಯನ್ನು ಮುಖ್ಯಾಧಿಕಾರಿ ನಾಗೇಶ ಅವರಿಗೆ ಸಲ್ಲಿಸಿದರು.

‘ಕಮಲಾಪುರ ಸುತ್ತಮುತ್ತ ಫಲವತ್ತಾದ ಕೃಷಿ ಜಮೀನು ಇದೆ. ಪಾಲಿಕೆ ವ್ಯಾಪ್ತಿಗೆ ಸೇರಿದರೆ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಶುರುವಾಗುತ್ತವೆ. ಹಣವಂತರು ರೈತರಿಗೆ ಆಮಿಷವೊಡ್ಡಿ ಕೃಷಿ ಜಮೀನು ಖರೀದಿಸುತ್ತಾರೆ. ರೈತರು ಕೃಷಿಯಿಂದ ವಿಮುಖಗೊಳ್ಳುತ್ತಾರೆ. ತೆರಿಗೆ ಭಾರ ಬೀಳುತ್ತದೆ. ಯಾವುದೇ ಕಾರಣಕ್ಕೂ ಪ್ರಸ್ತಾವದಲ್ಲಿ ಕಮಲಾಪುರ ಹೆಸರು ಸೇರಿಸಬಾರದು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಅಭಿಪ್ರಾಯಪಟ್ಟರು.

ಉಪಾಧ್ಯಕ್ಷೆ ಬೊರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್ ಸದಸ್ಯರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.