ADVERTISEMENT

Karnataka Rains | ನೆಲಕಚ್ಚಿದ ಭತ್ತದ ಪೈರು: ಆತಂಕದಲ್ಲಿ ರೈತರು

ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಾದ್ಯಂತ ಮತ್ತೆ ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:00 IST
Last Updated 25 ಅಕ್ಟೋಬರ್ 2025, 6:00 IST
<div class="paragraphs"><p>ಕಂಪ್ಲಿ ತಾಲ್ಲೂಕು ಸಣಾಪುರ ವ್ಯಾಪ್ತಿಯಲ್ಲಿ ಮಳೆಗೆ ಭತ್ತದ ಪೈರು ನೆಲಕಚ್ಚಿರುವ ದೃಶ್ಯ</p></div>

ಕಂಪ್ಲಿ ತಾಲ್ಲೂಕು ಸಣಾಪುರ ವ್ಯಾಪ್ತಿಯಲ್ಲಿ ಮಳೆಗೆ ಭತ್ತದ ಪೈರು ನೆಲಕಚ್ಚಿರುವ ದೃಶ್ಯ

   

ಬಳ್ಳಾರಿ: ಜಿಲ್ಲೆಯಾದ್ಯಂತ ಮತ್ತೆ ಗಾಳಿ ಮಳೆ ಸುರಿಯುತ್ತಿದೆ. ಕೊಯ್ಲು ಹಂತಕ್ಕೆ ತಲುಪಿದ್ದ ಮುಂಗಾರು ಬೆಳೆಗಳು ಹಾಳಾಗಿವೆ. ಮುಖ್ಯವಾಗಿ ಗಾಳಿ ಹೊಡೆತಕ್ಕೆ ಭತ್ತ ನೆಲಕ್ಕೊರಗಿದೆ.

ಕಂಪ್ಲಿ ವರದಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಎರಡು ದಿನದಿಂದ ಮಳೆ ಆಗುತ್ತಿರುವುದರಿಂದ ಎರಡು ಮನೆಗೆ ಹಾನಿಯಾಗಿದ್ದು, ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಭತ್ತದ ಪೈರು ನೆಲಕಚ್ಚಿದೆ.

ADVERTISEMENT

ಪಟ್ಟಣದ 9ನೇ ವಾರ್ಡ್ ನೂರ್ ಅಹ್ಮದ್ ಅವರ ಕಚ್ಚಾಮನೆ ಛಾವಣಿ ಭಾಗಶಃ ಕುಸಿದಿದೆ. ನಂ.10 ಮುದ್ದಾಪುರ ಗ್ರಾಮದ ವಡ್ಡರ ಹನುಮಕ್ಕ ಅವರ ಕಚ್ಚಾ ಮನೆಯ ಗೋಡೆ ಭಾಗಶಃ ಕುಸಿದಿದೆ.

ಇಲ್ಲಿಯ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಭತ್ತ ಕಟಾವು ಭರದಿಂದ ನಡೆಯುತ್ತಿದ್ದು, ಮಳೆಯಿಂದ ಒಕ್ಕಲು ಕಾರ್ಯಕ್ಕೆ ಅಡಚಣೆಯಾಗಿದೆ. ಕೆಲವೆಡೆ ಕಟಾವಿಗೆ ಸಿದ್ಧಗೊಂಡಿರುವ ಭತ್ತ ನೆಲಕಚ್ಚಿದ್ದು, ಮತ್ತೊಂದೆಡೆ ಮೊಳಕೆಯೊಡೆಯಲು ಆರಂಭವಾಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೆಲ ರೈತರು ಭತ್ತ ಮತ್ತು ಮುಸುಕಿನಜೋಳ ಒಕ್ಕಣೆ ಮಾಡಿ ಒಣಗಿಸಲು ರಾಶಿ ಹಾಕಿದ್ದು, ಮಳೆಯಿಂದ ತೇವವಾಗಿದೆ. ಆಗಾಗ ಸುರಿಯುತ್ತಿರುವ ಮಳೆಯಿಂದ ಒಕ್ಕಣೆ ಮಾಡಿದ ರಾಶಿಗೆ ತಾಡುಪಾಲು ಹೊದಿಕೆ ಹಾಕಿ ರಕ್ಷಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಸಣಾಪುರದ ಭಾಗದ ರೈತ ಕೆ.ಎಸ್. ದೊಡ್ಡಬಸಪ್ಪ ಅವರು 1638 ತಳಿಯ ಭತ್ತ ಕೊಯ್ಲು ಆರಂಭಿಸಿದ್ದು, ಮಳೆ ಸುರಿಯುತ್ತಿರುವುದರಿಂದ ಸದ್ಯ ಕಟಾವು ಸ್ಥಗಿತಗೊಳಿಸಿದ್ದಾರೆ. ಈ ಮಧ್ಯೆ ಮಳೆಗೆ ಭತ್ತ ನೆಲಕ್ಕೊರಗಿ ಮೊಳಕೆ ಒಡೆದಿರುವುದರಿಂದ ಚಿಂತಿತರಾಗಿದ್ದಾರೆ. ಎಕರೆಗೆ ₹40 ಸಾವಿರ ಖರ್ಚಾಗಿದ್ದು, ನಿರಂತರ ಮಳೆಗೆ ಭತ್ತ ಕೊಯ್ಲು ಮಾಡಿಲ್ಲ. ಇದೇ ರೀತಿ ಮಳೆ ಮುಂದುವರಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಬೇಸರದಿಂದ ತಿಳಿಸಿದರು.

‘ಸತತ ಮಳೆಯಿಂದಾಗಿ ಸಣಾಪುರ ಭಾಗದಲ್ಲಿ ಸುಮಾರು 200ಎಕರೆ ಭತ್ತ ಮೊಳಕೆ ಒಡೆದಿದೆ. ತಹಶೀಲ್ದಾರ್, ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ’ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.

ನೂರಾರು ಎಕರೆ ಭತ್ತದ ಬೆಳೆ ಹಾನಿ

ಹೂವಿನಹಡಗಲಿ: ತಾಲ್ಲೂಕಿನಾದ್ಯಂತ ಗುರುವಾರ ರಭಸದ ಮಳೆ ಸುರಿದಿದೆ. ನದಿ ತೀರದ ಗ್ರಾಮಗಳಲ್ಲಿ ಗಾಳಿ ಮಳೆಯಿಂದಾಗಿ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕೆ ಒರಗಿ ಬಿದ್ದಿದೆ.

ಹೊನ್ನೂರು, ರಾಜವಾಳ, ನವಲಿ, ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ನಂದಿಗಾವಿ, ಹರವಿ, ಹರವಿ ಬಸಾಪುರ, ಲಿಂಗನಾಯಕನಹಳ್ಳಿ, ಕುರುವತ್ತಿ ಇತರೆ ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಫಸಲು ನೆಲಕ್ಕೆ ಬಿದ್ದು ಹಾನಿಗೀಡಾಗಿದೆ. ಮುದೇನೂರು ಗ್ರಾಮದಲ್ಲಿ ಎರಡು ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ತಾಲ್ಲೂಕಿನ ಎಲ್ಲ ಭಾಗಗಳಲ್ಲೂ ರೈತರು ಮೆಕ್ಕೆಜೋಳ ಒಕ್ಕಣೆ ಮಾಡಿ , ಒಣಗಿಸಲು ರಸ್ತೆಗಳಲ್ಲಿ ಹಾಕಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಧಾನ್ಯದ ರಾಶಿ ಸಂರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಪಟ್ಟಣದ ಎಪಿಎಂಸಿ ಪ್ರಾಂಗಣ ಇತರೆ ಕಡೆಗಳಲ್ಲಿ ಮೆಕ್ಕೆಜೋಳ ರಾಶಿಗಳಿಗೆ ನೀರು ಹೊಕ್ಕು ಮುಗ್ಗಸು ಹಿಡಿದಿವೆ. ಬೆಲೆ ಕುಸಿತದ ಸಂಕಷ್ಟದ ನಡುವೆ ಮಳೆಯಿಂದ ಫಸಲು ಹಾನಿಗೀಡಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

‘ಹಡಗಲಿ ಹೋಬಳಿಯಲ್ಲಿ 45.2 ಮಿ.ಮೀ., ಹಿರೇಹಡಗಲಿ ಹೋಬಳಿಯಲ್ಲಿ 44 ಮಿ.ಮೀ. ಮಳೆ ಬಿದ್ದಿದೆ. ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾನ್ಯರ ಮಸಲವಾಡ, ಕಾಗನೂರು, ಹಕ್ಕಂಡಿ, ಹಿರೇಹಡಗಲಿಯಲ್ಲಿ ಐದು ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ’ ಎಂದು ತಹಶೀಲ್ದಾರ್ ಜಿ. ಸಂತೋಷಕುಮಾರ್ ತಿಳಿಸಿದ್ದಾರೆ.

‘ಗಾಳಿ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ, ವೈಜ್ಞಾನಿಕ ಪರಿಹಾರ ಕೊಡಿಸಬೇಕು’ ಎಂದು ಬ್ಯಾಲಹುಣ್ಸಿಯ ಲಕ್ಷ್ಮಣ, ಹಿರೇಬನ್ನಿಮಟ್ಟಿ ರೈತರಾದ ಎಚ್.ಬಸವರಾಜ, ವೀರೇಶ್ ಆಗ್ರಹಿಸಿದ್ದಾರೆ.

ಚಾವಣಿ ಕುಸಿತ ಕುರುಗೋಡು: ಎರಡು ದಿನಗಳಿಂದ ಸುರಿದ ಮಳೆಗೆ ತಾಲ್ಲೂಕಿನ ಓರ್ವಾಯಿ ಮತ್ತು ಬಸವಪುರ ಗ್ರಾಮಗಳಲ್ಲಿ ಕ್ರಮವಾಗಿ ಲಕ್ಷ್ಮೀ ಮತ್ತು ದೊಡ್ಡಬಸಮ್ಮ ಅವರ ಕಚ್ಚಾ ಮನೆ ಛಾವಣಿ ಭಾಗಶಃ ಕುಸಿದುಬಿದ್ದಿದೆ.

ಭಾರಿ ಮಳೆಯ ಪರಿಣಾಮ ದಾಸಾಪುರ ಗ್ರಾಮದ ಟಿ.ಚಂದ್ರಪ್ಪ, ಬಿ.ಹನುಮಂತಪ್ಪ, ಪಿ.ರುದ್ರಪ್ಪ, ಪಿ.ಲವಣ್ಣ, ಗುಡಿಸಲಿ ಶೇಷಣ್ಣ, ಶಾನವಾಪುರ ಹನುಮಯ್ಯ, ಪೂಜಾರಿ ದ್ಯಾವಣ್ಣ ಮತ್ತು ಗುಡಿಸಲಿ ಈರಣ್ಣ ಇವರಿಗೆ ಸೇರಿದ ಕಟಾವಿಗೆ ಬಂದಿದ್ದ ಅಂದಾಜು 40 ಎಕರೆಯಷ್ಟು ಭತ್ತದ ಬೆಳೆ ನೆಲಕಚ್ಚಿದೆ.

ಎರಡು ವಾರ ಕಳೆದರೆ ಭತ್ತದ ಬೆಳೆ ಕಟಾವುಮಾಡಿ ಮಾರಾಟಮಾಡಿ ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಅಕಾಲಿಕ ಮಳೆ ತಣ್ಣೀರೆರಚಿಗೆ.

ತೇವಾಂಶ ಹೆಚ್ಚಾಗಿ ಮೆಣಸಿನಕಾಯಿ ಬೆಳೆ ಬೇರುಕೊಳೆಯುವ ಹಂತ ತಲುಪಿದೆ. ಕಟಾವಿನ ಹಂತದಲ್ಲಿರುವ ಮೆಕ್ಕೆಜೋಳ ಗಿಡದಲ್ಲಿಯೇ ಕಪ್ಪಾಗತೊಡಗಿದೆ. ಮೆಕ್ಕೆಳೋಳ ಬೆಳೆದ ರೈತರಿಗೆ ಬೆಳೆನಷ್ಟದ ಜತೆಗೆ ಬೆಲೆ ಕುಸಿತದ ಬಿಸಿ ತಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.