ADVERTISEMENT

ಬಳ್ಳಾರಿ: ಕೆಐಒಸಿಎಲ್‌ ವಿರುದ್ಧ ಗ್ರಾಮಸಭೆ ನಿರ್ಣಯ

ಕೆಐಒಸಿಎಲ್‌ಗೆ ಮತ್ತೊಂದು ಅಡ್ಡಿ | ಗ್ರಾಮಸ್ಥರ ಒಕ್ಕೊರಲ ವಿರೋಧ

ಆರ್. ಹರಿಶಂಕರ್
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
   

ಬಳ್ಳಾರಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್‌) ಉದ್ದೇಶಿತ ದೇವದಾರಿ ಗಣಿಗೆ ಮತ್ತೊಂದು ಅಡ್ಡಿ ಎದುರಾಗಿದೆ. ಗಣಿಯ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 

ದೇವದಾರಿ ಗಣಿಗೆ ಸಂಬಂಧಿಸಿದಂತೆ ಕೆಐಒಸಿಎಲ್‌ ಮತ್ತು ಅರಣ್ಯ ಇಲಾಖೆ ನಡುವಿನ ನ್ಯಾಯಾಂಗ ಹೋರಾಟದಲ್ಲಿ ಕೋರ್ಟ್‌ ಕೆಐಒಸಿಎಲ್‌ ಪರ ಇತ್ತೀಚೆಗೆ ಆದೇಶ ನೀಡಿದೆ. ಈ ಮಧ್ಯೆ ಸಂಡೂರು ತಾಲ್ಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆ ಶನಿವಾರ ಜರುಗಿತು. ಸಭೆಯಲ್ಲಿ ಕೆಐಒಸಿಎಲ್‌ಗೆ ವಿರೋಧ ವ್ಯಕ್ತವಾಗಿದೆ.  

‘ಅರಣ್ಯ ಪ್ರದೇಶ, ಮಳೆ, ಪರಿಸರ ಹಿತದೃಷ್ಟಿಯಿಂದ ಕುದುರೆಮುಖ ಮೈನಿಂಗ್‌ ಅನ್ನು ಸ್ಥಗಿತಗೊಳಿಸಲು ಗ್ರಾಮಸ್ಥರು ತೀರ್ಮಾನಿಸಿದರು. ಕಂಪನಿಯು ಕೆಲ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಇದಕ್ಕೆ ಅನುಮತಿ ನೀಡಬೇಕು ಎಂದು ಗ್ರಾಮಸ್ಥರೊಬ್ಬರು ಸಭೆಯಲ್ಲಿ ತಿಳಿಸಿದರು. ಮುಂದಿನ ಕ್ರಮಕ್ಕಾಗಿ ಸಂಡೂರು ತಹಶೀಲ್ದಾರರಿಗೆ ಪತ್ರ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಗ್ರಾಮ ಪಂಚಾಯಿತಿ ನಿರ್ಣಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

ನಿರ್ಣಯಕ್ಕೆ ಮಾನ್ಯತೆಯುಂಟೇ?: ಗ್ರಾಮ ಸಭೆಯ ನಿರ್ಣಯಗಳಿಗೆ ಮಾನ್ಯತೆ ಇರುತ್ತದೆ. ಆದರೆ, ಇದು ಮುಖ್ಯ ಖನಿಜಕ್ಕೆ (ಮೇಜರ್‌ ಮಿನರಲ್‌) ಸಂಬಂಧಿಸಿದ ವಿಷಯ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಮುಖ್ಯ ಖನಿಜಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ ಈ ವಿಷಯದಲ್ಲಿ ಗ್ರಾಮಸಭೆ ನಿರ್ಣಯಕ್ಕೆ ಮಾನ್ಯತೆ ಇಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ವ್ಯಕ್ತವಾಗಿದೆ. 

‘ಗ್ರಾಮ ಪಂಚಾಯಿತಿ ಎಂಬುದು ಸ್ಥಳೀಯ ಸರ್ಕಾರ. ನಮ್ಮ ನಿರ್ಧಾರಕ್ಕೆ ಮಾನ್ಯತೆ ಇದೆ. ಗಣಿ ಲಾರಿಗಳ ಓಡಾಟದಿಂದ ನಮ್ಮ ಗ್ರಾಮಗಳು ದೂಳಿನಲ್ಲಿ ಮುಳುಗಿವೆ. ನಾವೆಲ್ಲರೂ ಶಾಪಗ್ರಸ್ತರಾಗಿದ್ದೇವೆ. ಹೊಸ ಗಣಿ ಬರುವುದಕ್ಕೆ ನಮ್ಮ ವಿರೋಧವಿದೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಅರಣ್ಯದ 401.57 ಹೆಕ್ಟೇರ್ ಪ್ರದೇಶದಲ್ಲಿ ಕೆಐಒಸಿಎಲ್‌ ‘ದೇವದಾರಿ’ ಗಣಿಗಾರಿಕೆ ನಡೆಸಲು ಯೋಜನೆ ರೂಪಿಸಿದೆ. ಆದರೆ, ಅರಣ್ಯ ತೀರುವಳಿ ಪತ್ರ ಇನ್ನೂ ಸಿಕ್ಕಿಲ್ಲ. ಗಣಿಗೆ ಒಂದು ಲಕ್ಷ ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ಈಗಾಗಲೇ ಅರಣ್ಯ ಇಲಾಖೆ ಹೇಳಿದೆ. ಜತೆಗೆ ಆಕ್ಷೇಪಿಸಿದೆ.

ಗ್ರಾಮದ ಹಿತದ ನಿರ್ಣಯವನ್ನು ಚರ್ಚಿಸಿ ಕೈಗೊಂಡಿದ್ದೇವೆ. ಇದನ್ನೂ ಮೀರಿ ಕೆಐಒಸಿಎಲ್‌ ಗಣಿಗಾರಿಕೆಗೆ ಮುಂದಾದರೆ ಅಪ್ಪಿಕೊ ಚಳವಳಿ ಆರಂಭಿಸುತ್ತೇವೆ
ಮೌನೇಶ್‌, ನರಸಿಂಗಪುರ ಗ್ರಾಮಸ್ಥ
ಗ್ರಾಮಸಭೆಯ ನಿರ್ಣಯಗಳಿಗೆ ಮಾನ್ಯತೆ ಇರುವುದೇನೋ ನಿಜ. ಆದರೆ, ಮುಂದಿನ ಸಭೆಗಳಲ್ಲಿ ಬದಲಿಸಲು ಅವಕಾಶಗಳಿವೆ 
ಮೊಹಮದ್‌ ಹ್ಯಾರಿಸ್‌ ಸುಮೇರ್‌, ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.