ADVERTISEMENT

ಸಿಬಿಐ ಬಿಜೆಪಿ ಕೆಲಸ ಮಾಡುತ್ತಿದೆ: ಡಿ.ಕೆ.ಶಿವಕುಮಾರ್

ಡಿಕೆಶಿಗೆ ಭವ್ಯ ಸ್ವಾಗತ; ಕಾರ್ಯಕ್ರಮದಲ್ಲಿ ನೂಕು ನುಗ್ಗಲು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 9:29 IST
Last Updated 22 ನವೆಂಬರ್ 2020, 9:29 IST
ಕಾರ್ಯಕ್ರಮದಲ್ಲಿ ಸೇರಿರುವ ಜನ ಸಮುಹ
ಕಾರ್ಯಕ್ರಮದಲ್ಲಿ ಸೇರಿರುವ ಜನ ಸಮುಹ    

ಹೊಸಪೇಟೆ: ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಗಣಿ ಜಿಲ್ಲೆ ಬಳ್ಳಾರಿಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅವರನ್ನು ಪಕ್ಷದ ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.

ಸ್ವತಃ ಡಿ.ಕೆ. ಶಿವಕುಮಾರ ಪಕ್ಷದ ಕಾರ್ಯಕರ್ತರೊಬ್ಬರ ಬೈಕ್ ಮೇಲೆ ಬಂದರು. ನಗರದ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ರೋಟರಿ ವೃತ್ತದ ಮೂಲಕ ಹಾದು ಬಂದ ಅವರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಪಟಾಕಿ ಸಿಡಿಸಿದರು. ಜಯಘೋಷ ಮುಗಿಲು ಮುಟ್ಟಿತು.

ADVERTISEMENT

ನಂತರ ಮೆರವಣಿಗೆ ಸಾಯಿಬಾಬಾ ವೃತ್ತದಲ್ಲಿರುವ ಸಾಯಿಲೀಲಾ ರಂಗಮಂದಿರದಲ್ಲಿ ಕೊನೆಗೊಂಡಿತು. ರಂಗಮಂದಿರದ ಎದುರು ಶಿವಕುಮಾರ ಅವರಿಗೆ ಮಹಿಳಾ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ರಂಗಮಂದಿರದೊಳಗೆ ಡಿ.ಕೆ. ಶಿವಕುಮಾರ ಬರುತ್ತಿದ್ದಂತೆ ಭಾರಿ ನೂಕು ನುಗ್ಗಲು ಉಂಟಾಯಿತು. ಶಿವಕುಮಾರ ಸೇರಿದಂತೆ ಇತರೆ ಮುಖಂಡರು ವೇದಿಕೆ ಮೇಲೆ ಬರಲು ಸಾಧ್ಯವಾಗಲಿಲ್ಲ. ಸುಮಾರು ಹದಿನೈದು ನಿಮಿಷಗಳ ನಂತರ ಅವರು ವೇದಿಕೆ ಏರಿದರು. ನೂಕು ನುಗ್ಗಲಿನ ನಡುವೆ ವಂದೇ ಮಾತರಂ ಗೀತೆ ಹಾಡಿದರು.

ಶಾಸಕ ಭೀಮಾ ನಾಯ್ಕ ಅವರು ಹಲವು ಸಲ ಮನವಿ ಮಾಡಿಕೊಂಡರು ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರು ಬಂದು ಕಾರ್ಯಕರ್ತರನ್ನು ಬೇರೆಡೆ ಕಳಿಸಿದರು. ಆದರೂ ನೂಕು ನುಗ್ಗಲು ಕಡಿಮೆಯಾಗಲಿಲ್ಲ. ಅಂತರ ಸಂಪೂರ್ಣ ಮರೆಯಾಗಿತ್ತು. ರಂಗಮಂದಿರದ ಹೊರಗೆ, ರಸ್ತೆಯ ಮೇಲೆ ಅಪಾರ ಸಂಖ್ಯೆಯ ಕಾರ್ಯಕರ್ತರು ಇದ್ದಾರೆ. ಸಾವಿರಕ್ಕೂ ಹೆಚ್ಚು ಬೈಕ್ ಗಳ ಮೇಲೆ ಬಂದಿರುವ ಕಾರ್ಯಕರ್ತರನ್ನು ಪೊಲೀಸರು ರಂಗಮಂದಿರದ ಕಡೆಗೆ ತೆರಳಲು ಅವಕಾಶ ಕಲ್ಪಿಸಲಿಲ್ಲ.

ಮೆರವಣಿಗೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ, ಸಿಬಿಐ ಬಿಜೆಪಿಯ ಕೆಲಸ ಮಾಡುತ್ತಿದೆ. ಯಾರು ಏನು ಬೇಕಾದರೂ ಮಾಡಲಿ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿರುವೆ. ಸಿಬಿಐ ಮೂಲಕ ನನ್ನನ್ನು ಹಣಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.