ADVERTISEMENT

New Year 2026: ಕೇಕ್‌ಗೆ ಭಾರಿ ಬೇಡಿಕೆ; ಮದ್ಯ ಮಧ್ಯಮ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:50 IST
Last Updated 1 ಜನವರಿ 2026, 7:50 IST
ಹೊಸ ವರ್ಷಾಚರಣೆಗೆಂದು ಬಳ್ಳಾರಿ ನಗರದಲ್ಲಿ ಜನ ಕೇಕ್‌ ಖರೀದಿಗಾಗಿ ಬೇಕರಿಯೊಂದರ ಬಳಿ ಜಮಾಯಿಸಿದ್ದರು
ಹೊಸ ವರ್ಷಾಚರಣೆಗೆಂದು ಬಳ್ಳಾರಿ ನಗರದಲ್ಲಿ ಜನ ಕೇಕ್‌ ಖರೀದಿಗಾಗಿ ಬೇಕರಿಯೊಂದರ ಬಳಿ ಜಮಾಯಿಸಿದ್ದರು   

ಬಳ್ಳಾರಿ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಬುಧವಾರ ಕೇಕ್​ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ನೂತನ ಕ್ಯಾಲೆಂಡರ್ ವರ್ಷವನ್ನು ಬರಮಾಡಿಕೊಳ್ಳುವ ಸಂಪ್ರದಾಯ ಈಚೆಗೆ ಜನಪ್ರಿಯವಾಗಿದೆ. ಹೀಗಾಗಿ ಹೊಸವರ್ಷದ ಮುನ್ನಾ ದಿನ ತಮಗಿಷ್ಟದ ಕೇಕ್‌ ಆರ್ಡರ್‌ ಮಾಡುವಲ್ಲಿ ಜನ ಮಗ್ನರಾಗಿದ್ದರು. ಇದರಲ್ಲಿ ಯುವ ಜನರೇ ಹಚ್ಚಾಗಿದ್ದದ್ದು ಕಂಡು ಬಂತು.

ರೆಡಿಮೇಡ್ ಕೇಕ್​ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ವ್ಯಾಪಾರದಲ್ಲಿ ಶೇ 40ರಷ್ಟು ಏರಿಕೆ ಕಂಡುಬಂದಿದೆ ಎನ್ನುತ್ತಾರೆ ಬೇಕರಿ ಮಾಲೀಕರು.

ಮದ್ಯ ಮಧ್ಯಮ: ಹೊಸ ವರ್ಷಾಚರಣೆಗೆ ಕೇಕ್‌ ಜತೆಗೆ ಮದ್ಯವೂ ಹೆಚ್ಚು ಮಾರಾಟವಾಗುತ್ತದೆ. ಆದರೆ, ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಅಷ್ಟೇನು ಹೆಚ್ಚಿನ ಪ್ರಮಾಣದಲ್ಲಿ ಮದ್ಯಕ್ಕೆ ಬೇಡಿಕೆ ಬಂದಿಲ್ಲ. 

2024ರ ಡಿ. 31ರಂದು 1,27,898 ಪೆಟ್ಟಿಗೆ ಭಾರತೀಯ ಮದ್ಯ (ಐಎಂಎಲ್‌) ಎತ್ತುವಳಿ ಮಾಡಲಾಗಿತ್ತು. ಆದರೆ, ಈ ವರ್ಷ 1,28,771 ಮದ್ಯ ಎತ್ತುವಳಿ ಮಾಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ 873 ಪೆಟ್ಟಿಗೆಗಳಿಗಷ್ಟೇ ಬೇಡಿಗೆ ಬಂದಿದೆ. 

2024ರ ಡಿ. 31ರಂದು 47,601 ಪೆಟ್ಟಿಗೆ ಬಿಯರ್‌ಗೆ ಬೇಡಿಕೆ ಬಂದಿತ್ತು. ಈ ಬಾರಿ ಅದು 50,612 ಪೆಟ್ಟಿಗೆಗೆ ಏರಿದೆ. ಹೀಗಾಗಿ ಮದ್ಯಕ್ಕೆ ಭಾರಿ ಬೇಡಿಕೆ ಏನೂ ವ್ಯಕ್ತವಾಗಿಲ್ಲ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.