ಸಂಡೂರು (ಬಳ್ಳಾರಿ): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿದ್ದು, ಅಧಿಕಾರದಲ್ಲಿ ಮುಂದುವರಿಯಲು ಅವರು ಅರ್ಹರಲ್ಲ. 15 ರಿಂದ 20 ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಸಂಡೂರು ಕ್ಷೇತ್ರದ ಬೊಮ್ಮಘಟ್ಟ, ಚೋರನೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ ಮುಡಾ ಹಗರಣ ಆರೋಪ ಸಾಬೀತಾಗುತ್ತದೆ. ಇ.ಡಿ, ಸಿಬಿಐ ವಿರುದ್ಧ ಸಿದ್ದರಾಮಯ್ಯ ವಿನಾ ಕಾರಣ ಅಪಪ್ರಚಾರ ಮಾಡುತ್ತಾರೆ. ನಮಗೆ ಲೋಕಾಯುಕ್ತ ಮೇಲೆ ನಂಬಿಕೆಯಿಲ್ಲ. ಸಿಬಿಐ ತನಿಖೆ ನಡೆಸಲಿ’ ಎಂದರು.
‘ಕಾಂಗ್ರೆಸ್‌ಗೆ ಈ ಉಪಚುನಾವಣೆಯಲ್ಲಿ ಸೋಲಿಸದಿದ್ದರೆ, ರಾಜ್ಯದ ಪ್ರತಿ ಮನೆಯು ವಕ್ಫ್ ಆಸ್ತಿಯಾಗಲಿದೆ.ವಕ್ಫ್ ಮೂಲಕ ಹೊಸ ಜಿಹಾದಿ ಆರಂಭವಾಗಿದೆ. ಇದು ಶುದ್ಧ ದುರುಳತನ. ಕಾಂಗ್ರೆಸ್ ಗೊತ್ತಿದ್ದೇ ಇದನ್ನು ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
‘ನಾವು ವಕ್ಫ್ ಆಸ್ತಿ ಉಳಿಸುವುದಾಗಿ ಹೇಳಿದ್ದೆವು. ಅನ್ವರ್ ಮಾನಪ್ಪಾಡಿ ವರದಿ ಅದಕ್ಕೆ ಆಧಾರವಾಗಿತ್ತು. ವಕ್ಫ್ ಆಸ್ತಿಯನ್ನು ಕಬಳಿಸಲಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಕಾಂಗ್ರೆಸ್ ನಾಯಕರಾದ ರೆಹಮಾನ್ ಖಾನ್, ಸಿಎಂ ಇಬ್ರಾಹಿಂ, ಹ್ಯಾರಿಸ್ ಸೇರಿದಂತೆ ಹಲವರು ಹೆಸರು ಅದರಲ್ಲಿತ್ತು’ ಎಂದರು.
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ‘ನಾನು ₹1 ಲಕ್ಷ ಕೋಟಿ ದೋಚಿದ್ದು, ಅದನ್ನು ವಸೂಲಿ ಮಾಡಿ ಬಡವರಿಗೆ ಮನೆ ಕಟ್ಟಿಸಿಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅವರು ಐದು ವರ್ಷ ಅಧಿಕಾರದಲ್ಲಿ ಇದ್ದರೂ ಏನು ಮಾಡಿದರು? ಅವರದ್ದೇ ಯುಪಿಎ ಸರ್ಕಾರ ಇದ್ದರೂ ಏನು ಮಾಡಲಿಲ್ಲ. ನನ್ನನ್ನು ಜೈಲಿಗಟ್ಟಿದರು. ಅಂದು ಏನನ್ನೂ ಮಾಡಲಾಗದವರು, ಈಗ ಏನು ಮಾಡುವರು’ ಎಂದು ಪ್ರಶ್ನಿಸಿದರು.
‘ತಾಯಿ ಚಾಮುಂಡೇಶ್ವರಿ ಮುಡಾ ಹಗರಣದ ವಿಚಾರದಲ್ಲಿ ಸಿಎಂ ಕುಟುಂಬ ಸಿಲುಕುವಂತೆ ಮಾಡಿದ್ದಾಳೆ. ಮೈಸೂರಿನಿಂದ ಚಾಮುಂಡಿಯೇ ಅವರನ್ನು ಹೊರಗೆ ಹಾಕುತ್ತಾಳೆ. ನವೆಂಬರ್ 13ರ ಬಳಿಕ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಗ್ಯಾರಂಟಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.