ADVERTISEMENT

ದಾಳಿ ಪ್ರಕರಣ | ನ್ಯಾಯ ಪಡೆಯುವವರೆಗೆ ಹೋರಾಟ: ಮಾಜಿ ಸಚಿವ ಶ್ರೀರಾಮುಲು ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 1:43 IST
Last Updated 22 ಜನವರಿ 2026, 1:43 IST
ಬಿ. ಶ್ರೀರಾಮುಲು 
ಬಿ. ಶ್ರೀರಾಮುಲು    

ಬಳ್ಳಾರಿ: ಜ.1ರಂದು ನಡೆದ ದಾಳಿ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಾಧ್ಯಮಗಳ ಮೂಲಕ ಸಿಐಡಿಗೆ ಎಲ್ಲ ದಾಖಲೆಗಳನ್ನು ನೀಡಿದ್ದೇವೆ.  ಈ ಗಲಭೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಭಾವಿಸಿದ್ದೆವು ಆದರೆ, ಹಾಗೆ ಕಾಣುತ್ತಿಲ್ಲ. ಸಿಐಡಿಗೆ ವಹಿಸಿದ ಕೂಡಲೇ ಎಲ್ಲ ಮುಗಿಯಿತು ಎಂದು ಸರ್ಕಾರ ಭಾವಿಸದಂತೆ ಕಾಣುತ್ತಿದೆ. ಆದರೆ ನಾವು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನ್ಯಾಯ ಪಡೆಯುವವರೆಗೆ ಹೋರಾಟ ನಡೆಯಲಿದೆ. ಫ್ಯೂಡಲ್‌ ಸಂಸ್ಕೃತಿ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದರು.  

‘ಕಾಂಗ್ರೆಸ್‌ ಸರ್ಕಾರ ಬಂದಿರುವ ಕಡೆಗಳಲ್ಲೆಲ್ಲ ಡ್ರಗ್ಸ್‌ ಹಾವಳಿ ಮಿತಿ ಮೀರಿದೆ. ಬಳ್ಳಾರಿಯಲ್ಲೂ ಗಾಂಜಾ, ಡ್ರಗ್ಸ್‌, ಮಟ್ಕಾ ದಂಧೆ ಹೆಚ್ಚಾಗಿದೆ. ಅದನ್ನೇ ನಾನು ಜ. 17ರ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದೆ. ಅದಕ್ಕಾಗಿ ಅತ್ಯಾಚಾರ ಪ್ರಕರಣವೊಂದನ್ನು ಉಲ್ಲೇಖಿಸಿದ್ದೆ. ಇದರಿಂದ ಬಾಲಕಿಗೆ, ಆಕೆಯ ಕುಟುಂಬಕ್ಕೆ ನೋವಾಗಿದ್ದರೆ ನಾನು ಅವರ ಕ್ಷಮೆ ಕೇಳುತ್ತೇನೆ. ಆ ಸಂತ್ರಸ್ತ ಕುಟುಂಬದ ಜತೆಗೆ ನಾನು ಇರುತ್ತೇನೆ. ನ್ಯಾಯ ಸಿಗುವ ವರೆಗೆ ಆವರೊಂದಿಗೆ ಇರುತ್ತೇನೆ. ಕುಟುಂಬ ಭಯ ಪಡುವ ಅಗತ್ಯವಿಲ್ಲ. ನಾನು ಹೆಸರು ಉಲ್ಲೇಖ ಮಾಡಬಾರದಿತ್ತು. ಮಾಡಿಬಿಟ್ಟಿದ್ದೇನೆ. ಆಕೆಯೂ ನನ್ನ ಮಗಳೇ. ಹಾಗೆಂದು ತಿಳಿದೇ ಹೆಸರು ತೆಗೆದುಕೊಂಡೆ. ಬಳ್ಳಾರಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದಂಥ ಸ್ಥಿತಿ ಇದೆ. ನಗರದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ತೀವ್ರತೆಯನ್ನು ವಿವರಿಸಲು ನಾನು ಹಾಗೆ ಮಾಡೇಕಾಯಿತು. ಈ ಪ್ರಕರಣದಲ್ಲಿ ಕಾನೂನು ಕ್ರಮಗಳನ್ನು ನಾನು ಎದುರಿಸುವೆ’ ಎಂದರು.  

ADVERTISEMENT

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದ ಬಳಿಕ ತೆಲಂಗಾಣದಲ್ಲಿ ಚುನಾವಣೆಗಳು ನಡೆದವು. ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ನಡೆಯಿತು. ನಿಗಮದಲ್ಲಿ ದೋಚಿದ  ಹಣವನ್ನೇ ಈ ಚುನಾವಣೆಗಳಿಗೆ ಬಳಸಲಾಯಿತು. ಈಗ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮುಂದಿನ ಮುಂದಿನ ದಿನಗಳಲ್ಲಿ ಎದುರುವಾಗುವ ಪಂಚ ರಾಜ್ಯಗಳ ಚುನಾವಣೆ, ಪಾಲಿಕೆ ಚುನಾಣೆಗೆ ಇಲ್ಲಿ ಹಣ ಹೊಂದಿಸಲಾಗುತ್ತಿದೆ. ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ ಅವರ ಮಕ್ಕಳು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಆಡಿಯೊ ಕೂಡ ಬಿಡುಗಡೆಯಾಗಿದೆ. ಸರ್ಕಾರದಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ. ಹೀಗಾಗಿ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವ ತಿಮ್ಮಾಪುರ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಶ್ರೀರಾಮುಲು ತಿಳಿಸಿದರು. 

‘ಜ. 1ರ ಘಟನೆ ಖಂಡಿಸಿ ಪಾದಯಾತ್ರೆಗೆ ಆರಂಭಿಕ ಒಪ್ಪಿಗೆ ಸಿಕ್ಕಿತ್ತು. ಆದರೆ, ಬೇರೆ ಬೇರೆ ಕಾರಣಗಳಿಗಾಗಿ ಪಾದಯಾತ್ರೆಯನ್ನು ಮುಂದೂಡಲಾಯಿತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ’ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದಲ್ಲಿ ಮತಪತ್ರ ಬಳಸುವ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ‘ಇವಿಎಂ ತಂದಿದ್ದೇ ಕಾಂಗ್ರೆಸ್‌. ಈಗ ಸೋಲಾಗುತ್ತಿರುವುದರಿಂದ ಮತಪತ್ರ ಕೇಳುತ್ತಿದ್ದಾರೆ. ಬೇರೆ ದೇಶಗಳೇ ಇವಿಎಂ ಅನ್ನು ಒಪ್ಪಿಕೊಳ್ಳುತ್ತಿವೆ. ಮತಪತ್ರಗಳ ಬಳಕೆಯಿಂದ ನಾವು ಹಿಂದಕ್ಕೆ ಚಲಿಸಿದಂತಾಗಿದೆ’ ಎಂದರು. 

ಪಾಲಿಕೆ ಸದಸ್ಯ ಹನುಮಂತಪ್ಪ, ಬಿಜೆಪಿ ಮುಖಂಡ ಪಾಲಣ್ಣ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.