ADVERTISEMENT

ಬಳ್ಳಾರಿ: ಬೀದಿ ನಾಯಿ ನಿರ್ವಹಣೆ ದುಬಾರಿ

ಆಶ್ರಯ ತಾಣಗಳಿಗೆ ಖರ್ಚಾಗಬಹುದು ಕೋಟ್ಯಂತರ ಹಣ | ಸ್ಥಳೀಯ ಸಂಸ್ಥೆಗಳಿಗೆ ತಲೆಬಿಸಿ

ಆರ್. ಹರಿಶಂಕರ್
Published 3 ಫೆಬ್ರುವರಿ 2026, 1:50 IST
Last Updated 3 ಫೆಬ್ರುವರಿ 2026, 1:50 IST
ಬೀದಿ ನಾಯಿ (ಪ್ರಾತಿನಿಧಿಕ ಚಿತ್ರ)
ಬೀದಿ ನಾಯಿ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ಸುಪ್ರೀಂ ಕೋರ್ಟ್‌ನ ಆದೇಶದಂತೆ ಬೀದಿನಾಯಿಗಳನ್ನು ನಗರದ ಹೊರವಲಯದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ, ದೇಶದಾದ್ಯಂತ ನಡೆಯುತ್ತಿದ್ದು, ಬಳ್ಳಾರಿಯಲ್ಲೂ ಸಿದ್ಧತೆಗಳಾಗುತ್ತಿವೆ. ಆಶ್ರಯತಾಣದಲ್ಲಿರಿಸಿ ನಾಯಿಗಳನ್ನು ಸಾಕುವುದು ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ತೀರ ವೆಚ್ಚದಾಯಕವಾಗಿ ಪರಿಣಮಿಸಿದೆ. ಒಂದು ನಾಯಿಯ ಆಹಾರಕ್ಕೆಂದೇ ನಿತ್ಯ ₹29.80 ಖರ್ಚು ಮಾಡಬೇಕಾಗಿದೆ. 

ಬೀದಿನಾಯಿ ಕಡಿತ ಪ್ರಕರಣಗಳು ಏರಿಕೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿತ್ತು. ‘ಆಸ್ಪತ್ರೆ, ಶಾಲೆ, ಬಸ್‌, ರೈಲು ನಿಲ್ದಾಣ, ಕ್ರೀಡಾ ಸಂಕೀರ್ಣಗಳಿಂದ ಬೀದಿ ನಾಯಿಗಳನ್ನು ಕೂಡಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ನ. 7ರಂದು ಆದೇಶಿಸಿತ್ತು. ನಾಲ್ಕು ವಾರಗಳ ಒಳಗಾಗಿ  ಆಶ್ರಯ ತಾಣಗಳನ್ನು ಗುರುತು ಮಾಡಬೇಕು, ಬಳಿಕ ನಾಯಿಗಳನ್ನು ಸ್ಥಳಾಂತರ ಮಾಡಲು ಆರಂಭಿಸಬೇಕು’ ಎಂದು ಹೇಳಿತ್ತು.

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ನ. 13ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರದ ಮುಖ್ಯಕಾರ್ಯದರ್ಶಿ ‘ನಾಯಿಗಳ ನಿಯಂತ್ರಣಕ್ಕೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು’ ಎಂದು ಸೂಚಿಸಿದ್ದರು. ಆದರಂತೆ ಜಿಲ್ಲಾಡಳಿತವು ಆಶ್ರಯತಾಣಕ್ಕೆಂದು ಆಲದಹಳ್ಳಿ ಸಮೀಪದ 10 ಎಕರೆ ಜಮೀನನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದೆ. ಈ ಮಧ್ಯೆ, ಆಶ್ರಯತಾಣದ ನಿರ್ಮಾಣಕ್ಕಾಗಿ ಸರ್ಕಾರವೂ ₹1.25 ಕೋಟಿ ನೀಡಿದೆ ಎನ್ನಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ.  

ADVERTISEMENT

ಎಸ್‌ಒಪಿ ಬಿಡುಗಡೆ: ನಾಯಿಗಳನ್ನು ಸ್ಥಳಾಂತರಿಸಿ ಆಶ್ರಯತಾಣಗಳಲ್ಲಿಟ್ಟು ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತಾದರೂ, ಅದು ಹೇಗೆ ಎಂಬ ಗೊಂದಲ ರಾಜ್ಯಗಳಲ್ಲಿ ಮನೆ ಮಾಡಿತ್ತು. ಈ ಮಧ್ಯೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಬಿಡುಗಡೆ ಮಾಡಿ, ಆಹಾರ, ನಿರ್ವಹಣೆ, ಆಶ್ರಯತಾಣದ ವಿನ್ಯಾಸಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. 

ನೂರು ನಾಯಿಗಳಿರುವ ಒಂದು ಹಿಂಡನ್ನು 70X40 ನಿವೇಶನದಲ್ಲಿ ಇರಿಸಬೇಕು. ಪ್ರತಿ ಹತ್ತು ನಾಯಿಗಳಿಗೆ 10 ಪ್ರತ್ಯೇಕ ವಿಭಾಗ ಮಾಡಬೇಕು ಎಂದು ತಿಳಿಸಲಾಗಿತ್ತು. 

ಆಹಾರದ ವಿಚಾರಕ್ಕೆ ಬಂದಾಗ ಮರಿಗಳಿಗೆ ಮತ್ತು ಬೆಳೆದ ನಾಯಿಗಳಿಗೆ ಪ್ರತ್ಯೇಕವಾದ ಆಹಾರ ವಿಧಾನವನ್ನು ಸೂಚಿಸಲಾಗಿತ್ತು. ಮರಿಗಳಿಗಾದರೆ ನಿತ್ಯ 4–6 ಬಾರಿ ಆಹಾರ ನೀಡಬೇಕು. 6 ತಿಂಗಳು ಮೇಲ್ಪಟ್ಟು ನಾಯಿಗಳಿಗೆ ಅವುಗಳ ದೇಹ ತೂಕದ ಆಧಾರದ ಮೇಲೆ ನಿತ್ಯ 100 ಗ್ರಾಂ.ನಿಂದ 1.2 ಕೆ.ಜಿ ವರೆಗೆ 2–3 ಬಾರಿ ಆಹಾರ ನೀಡಬೇಕು ಎಂದು ತಿಳಿಸಲಾಗಿತ್ತು. ಇದೇ ಆಧಾರದಲ್ಲಿ ರಾಜ್ಯ ಸರ್ಕಾರವು ಎಲ್ಲ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿ ಎಸ್‌ಒಪಿ ಪಾಲಿಸುವಂತೆ ತಿಳಿಸಿದೆ. 

ಸದ್ಯಕ್ಕೆ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ. ಆಶ್ರಯತಾಣ ನಿರ್ಮಾಣಕ್ಕೆ ಸಿದ್ಧತೆಗಳೆಲ್ಲವೂ ನಡೆಯುತ್ತಿದೆ. ಆರಂಭದಲ್ಲಿ ಸಮಸ್ಯಾತ್ಮಕವಾಗಿರುವ 4–5 ಸಾವಿರ ನಾಯಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ
ಪಿ. ಗಾದೆಪ್ಪ ಬಳ್ಳಾರಿ ಮೇಯರ್‌
ಸುಪ್ರೀಂ ಕೋರ್ಟ್‌ನ ಆದೇಶದಂತೆ ಪಾಲಿಕೆಯಂತೂ ಸಿದ್ಧತೆಗಳನ್ನು ಕೈಗೊಂಡಿದೆ. ನಾಯಿಗಳನ್ನು ಆಶ್ರಯತಾಣಗಳಲ್ಲಿಟ್ಟು ನಿರ್ವಹಿಸಲು ಸಂಸ್ಥೆಯೊಂದು ಅಂದಾಜು ಪಟ್ಟಿ ನೀಡಿದೆ. ಅದರಲ್ಲಿ ಹಲವು ಮಾರ್ಪಾಡು ಮಾಡಲು ಸೂಚಿಸಿದ್ದೇವೆ
ಮಂಜುನಾಥ್‌ ಪಾಲಿಕೆ ಆಯುಕ್ತ

ಆಹಾರಕ್ಕೇ ನಿತ್ಯ 

₹29.80 ಖರ್ಚು ‘ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ’ ಸೂಚಿಸಿರುವ ಎಸ್‌ಒಪಿ ಆಧಾರದಲ್ಲಿ ಖಾಸಗಿ ಸಂಸ್ಥೆಯೊಂದು ಬಳ್ಳಾರಿ ಮಹಾನಗರ ಪಾಲಿಕೆಗೆ ಅಂದಾಜು ಪಟ್ಟಿಯೊಂದನ್ನು ಸಲ್ಲಿಸಿದೆ. ಒಂದು ನಾಯಿಯ ಆಹಾರಕ್ಕೆ ನಿತ್ಯ ₹29.80 ಖರ್ಚು ಮಾಡಬೇಕಾಗಬಹುದು ಎಂದು ಸಂಸ್ಥೆ ತಿಳಿಸಿದೆ.  ಅಂದರೆ ಒಂದು ನಾಯಿಗೆ ತಿಂಗಳಿಗೆ ₹894 ಖರ್ಚು ಬರಲಿದೆ.

ವಾರ್ಷಿಕ ₹10728 ಆಗಲಿದೆ. ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 16 ಸಾವಿರದಿಂದ 17 ಸಾವಿರ ನಾಯಿಗಳಿವೆ ಎನ್ನಲಾಗಿದೆ. 15 ಸಾವಿರ ನಾಯಿಗಳನ್ನು ಸ್ಥಳಾಂತರಿಸಿ ಆಶ್ರಯ ತಾಣಗಳಲ್ಲಿಟ್ಟು ನಿರ್ವಹಿಸಿದರೆ ಅವುಗಳ ಆಹಾರಕ್ಕೆಂದೇ ಪಾಲಿಕೆ ತಿಂಗಳಿಗೆ ಕನಿಷ್ಠ ₹1.34 ಖರ್ಚು ಮಾಡಬೇಕಾಗಬಹುದು. ವರ್ಷಕ್ಕೆ ₹16.09 ಕೋಟಿ ಆಗಬಹುದು ಎನ್ನಲಾಗಿದೆ. ಇದು ಪಾಲಿಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.  ಇದಿಷ್ಟೇ ಅಲ್ಲದೇ ಆಶ್ರಯತಾಣದ ಸ್ವಚ್ಛತೆ ನಿರ್ವಹಣೆ ಸಿಬ್ಬಂದಿ ಲಸಿಕೆ ನಿತ್ಯದ ಖರ್ಚುವೆಚ್ಚ ಸೇರಿದಂತೆ ಒಂದು ನಾಯಿಗೆ ₹157 ಖರ್ಚು ಬರಬಹುದು ಎಂದು ಸಂಸ್ಥೆಯು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.