ADVERTISEMENT

ಬಳ್ಳಾರಿ | ಬೀದಿನಾಯಿಗಳ ಸೆರೆ: ಮುಂದೇನು?

ಸರ್ಕಾರದಿಂದ ಮಾರ್ಗಸೂಚಿ ನಿರೀಕ್ಷೆಯಲ್ಲಿ ಸ್ಥಳೀಯ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:39 IST
Last Updated 8 ಡಿಸೆಂಬರ್ 2025, 4:39 IST
<div class="paragraphs"><p>ಬಳ್ಳಾರಿ ನಗರದ ಜನವಸತಿ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಸೆರೆ ಹಿಡಿದರು</p></div>

ಬಳ್ಳಾರಿ ನಗರದ ಜನವಸತಿ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಸೆರೆ ಹಿಡಿದರು

   

ಬಳ್ಳಾರಿ: ಬೀದಿ ನಾಯಿಗಳನ್ನು ಜನವಸತಿ ಪ್ರದೇಶದಿಂದ ದೂರದ ಪ್ರದೇಶಕ್ಕೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸರ್ಕಾರವೂ ಆದೇಶಿಸಿದೆ. ಆದರೆ, ಅದರ ಪ್ರಕ್ರಿಯೆ ಹೇಗೆ ಎಂಬುದು ಎಂಬುದು ನಗರ ಸ್ಥಳೀಯ ಸಂಸ್ಥೆಗಳಿಗೆ ಗೊಂದಲವಾಗಿದೆ.

ಬೀದಿನಾಯಿ ಕಡಿತ ಪ್ರಕರಣಗಳು ಏರಿಕೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ‘ಆಸ್ಪತ್ರೆ, ಶಾಲೆ, ಬಸ್‌, ರೈಲು ನಿಲ್ದಾಣ, ಕ್ರೀಡಾ ಸಂಕೀರ್ಣಗಳಿಂದ ಬೀದಿ ನಾಯಿಗಳನ್ನು ಕೂಡಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ನ. 7ರಂದು ಆದೇಶಿಸಿತ್ತು. ನಾಲ್ಕು ವಾರಗಳ ಒಳಗೆ ಆಶ್ರಯ ತಾಣಗಳನ್ನು ಗುರುತಿಸಬೇಕು, ಬಳಿಕ ನಾಯಿಗಳನ್ನು ಸ್ಥಳಾಂತರಿಸಬೇಕು’ ಎಂದರು. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ‘ನಾಯಿಗಳ ನಿಯಂತ್ರಣಕ್ಕೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಸೂಚಿಸಿದ್ದರು.  

ADVERTISEMENT

ಅದರಂತೆ ಈಗಾಗಲೇ  ಆಸ್ಪತ್ರೆ, ಶಾಲೆ, ಬಸ್‌, ರೈಲು ನಿಲ್ದಾಣ, ಕ್ರೀಡಾ ಸಂಕೀರ್ಣಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಿವೆ. ಅಲ್ಲಿರುವ ನಾಯಿಗಳನ್ನು ಕೊಂಡೊಯ್ದು (ಪ್ರಾಣಿ ಜನನ ನಿಯಂತ್ರಣ ಕಾಯ್ದೆ –2023ರ ಅಡಿ‌ಯಲ್ಲಿ ಸ್ಥಾಪಿಸಿರುವ) ಸಂತಾನ ನಿಯಂತ್ರಣಾ (ಎಬಿಸಿ) ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆದರೆ, ಅವುಗಳನ್ನು ಮತ್ತೆ ಅದೇ ಜಾಗದಲ್ಲಿ ಬಿಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ.

ಆಶ್ರಯ ತಾಣಗಳಲ್ಲಿಯೇ ನಾಯಿಗಳನ್ನು ಬಿಡಬೇಕು ಎಂಬ ಸೂಚನೆ ಇದೆ. ಈ ಸೂಚನೆಯಂತೆ, ಹಲವು ಪಾಲಿಕೆ, ಸ್ಥಳೀಯ ಸಂಸ್ಥೆಗಳು ಜಾಗವನ್ನೇನೋ ಗುರುತು ಮಾಡಿಕೊಂಡಿವೆ.

ಆದರೆ, ಅದರಲ್ಲಿ ನಾಯಿಗಳನ್ನು ಬಿಡುವುದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲದೇ, ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಇಲ್ಲದೇ ಸ್ಥಳೀಯ ಸಂಸ್ಥೆಗಳು ಒದ್ದಾಡುತ್ತಿವೆ. 

‘ಆಶ್ರಯ ತಾಣ ಎಂದರೆ ಏನು, ಹೇಗೆ ನಿರ್ಮಿಸಬೇಕು, ಅದರಕ್ಕಿರುವ ಮಾರ್ಗಸೂಚಿಗಳು ಏನು, ಅದಕ್ಕೆ ಹಣ ಹೇಗೆ ಹೊಂದಿಸಬೇಕು, ಸರ್ಕಾರವೇನಾದರೂ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುತ್ತದೆಯೇ, ಇಲ್ಲವೇ ಸ್ಥಳೀಯ ಸಂಸ್ಥೆಗಳೇ ಹೊಂದಿಸಿಕೊಳ್ಳಬೇಕೆ, ಆಶ್ರಯ ತಾಣ ನಿರ್ಮಿಸಲು ಟೆಂಡರ್‌ ಕರೆಯಬೇಕೇ, ಎಲ್ಲ ಬೀದಿ ನಾಯಿಗಳನ್ನೂ ಒಂದೇ ಪ್ರದೇಶದಲ್ಲೇ ಕೂಡಿ ಹಾಕುವುದೇ, ರೋಗ ಪೀಡಿತ ನಾಯಿಗಳನ್ನು ಪ್ರತ್ಯೇಕಿಸುವುದೇ, ಅದಕ್ಕೆ ಚಿಕಿತ್ಸೆ ಕೊಡಬೇಕೆ, ಚಿಕಿತ್ಸೆ ಕೊಡುವುದಾದರೆ ಪಶುವೈದ್ಯರನ್ನು ನೇಮಕ ಮಾಡಿಕೊಳ್ಳಬೇಕೆ’ ಎಂಬ ಪ್ರಶ್ನೆಗಳು ಅಧಿಕಾರಿಗಳನ್ನು ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.