
PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..
ಬಳ್ಳಾರಿ: ತೆಕ್ಕಲಕೋಟೆ ಪಟ್ಟಣವು ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಸ್ಥಳವಾಗಿದೆ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳು ಇನ್ನೂ ಮೂಡಿರದ, ಭಾಷೆ, ಜಾತಿ, ಮತ-ಧರ್ಮಗಳು ಹುಟ್ಟಿರದ ಕಾಲಘಟ್ಟದಲ್ಲಿ ಇಲ್ಲಿನ ಪೂರ್ವಜರು ವಾಸಿಸುತ್ತಿದ್ದರು.
ಆದಿಮಾನವರು ಹಣ್ಣು ಹೆಕ್ಕಿ ತಿನ್ನುವ ಹಾಗೂ ಪ್ರಾಣಿಬೇಟೆ ಮಾಡುವ ಹಂತದಿಂದ ಮುಂದೆ ಸಾಗುತ್ತಾ, ಒಂದೇ ಸ್ಥಳದಲ್ಲಿ ನೆಲೆನಿಂತು ಕೃಷಿ ಮತ್ತು ಪಶುಪಾಲನೆ ಮಾಡುವ ಹಂತಕ್ಕೆ ದಾಟಿದರು. ಆ ಮಹತ್ವದ ತಿರುವಿನ ಘಟ್ಟದಲ್ಲಿ ಉದಯಿಸಿದ ಜನವಸತಿಗಳಲ್ಲಿ ತೆಕ್ಕಲಕೋಟೆಯೂ ಒಂದು.
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ನೈರುತ್ಯ ಭಾಗದಲ್ಲಿರುವ ಬೆಟ್ಟಗಳ ಸಾಲುಗಳು ಪೂರ್ವೈತಿಹಾಸಿಕ ಕಾಲದ ರಹಸ್ಯಗಳನ್ನು ಒಳಗೊಂಡ ಪ್ರದೇಶವಾಗಿದೆ. ಇದು ಕೇವಲ ಒಂದು ತಾಣವಲ್ಲ; ಇಲ್ಲಿ ಕಲ್ಲಿನಲ್ಲಿ ಕೆತ್ತಲ್ಪಟ್ಟ ಚಿತ್ರಗಳು ಸೇರಿದಂತೆ ಕಾಲಗರ್ಭದಲ್ಲಿ ಸೇರಿದ ನವಶಿಲಾಯುಗದ ಅಮೂಲ್ಯ ಸಂಪತ್ತು ಕಾಣಸಿಗುತ್ತದೆ.
ತೆಕ್ಕಲಕೋಟೆಯಲ್ಲಿ ಇತ್ತೀಚೆಗೆ ನಡೆದ ಉತ್ಖನನದ ಸಂದರ್ಭದಲ್ಲಿ ಸುಮಾರು 3.5 ರಿಂದ 5 ಸಾವಿರ ವರ್ಷಗಳ ಹಿಂದಿನ ಮೂರು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಇತಿಹಾಸಾಸಕ್ತರ ಗಮನ ಸೆಳೆದಿವೆ. ಇಲ್ಲಿನ ಪ್ರಮುಖ ಬೆಟ್ಟಗಳಾದ ಏಡಿಕೆರೆ ಗುಡ್ಡ, ಹುಡೇದ ಗುಡ್ಡ, ಭರಮಕಲ್ಲು ಗುಡ್ಡ, ಓಬುಳೇಶನ ಗುಡ್ಡ, ಕಡೆಗುಡ್ಡ, ಡೊಂಕಲಮ್ಮನ ಗುಡ್ಡ, ಮಾಚಲಪ್ಪನ ಗುಡ್ಡ, ಕರಿಮಟ್ಟಿ ಗುಡ್ಡ, ಹಿರೇಹರಳ ಗುಡ್ಡ, ಜಕ್ಕೇರು ಗುಡ್ಡ, ಗೌಡರಮೂಲೆ, ಬಾಳೆತೋಟ ಸೇರಿದಂತೆ ಒಟ್ಟು 17 ಬೆಟ್ಟಗಳನ್ನು ಗುರುತಿಸಲಾಗಿದೆ.
ಕೆಲವು ಗಮನಾರ್ಹ ಬೆಟ್ಟಗಳು
ಕರಿಮಟ್ಟಿ ಗುಡ್ಡ : ಅನೇಕ ಶಿಲಾಕೆತ್ತನೆಗಳು ಮತ್ತು ಶಿಲಾಚಿತ್ರಗಳಿಗೆ ಪ್ರಸಿದ್ಧ.
ಹಿರೇಹರಳ ಗುಡ್ಡ : ನವಶಿಲಾಯುಗದ ಮಾತೃ ದೇವತೆಯ (ಸ್ಪಿಂಕ್ಸ್ ಮಾದರಿಯ) ಆಕೃತಿಯನ್ನು ಹೊಂದಿದೆ.
ಹುಡೇದ ಗುಡ್ಡ : ಅದ್ಭುತ ಶಿಲಾಕಲೆಯ ತಾಣ. ಇಲ್ಲಿ ಬಂಡೆಗಳ ನಡುವೆ ಹತ್ತಿ-ಇಳಿಯುವಾಗ ಶಿಲಾಯುಗದ ಬೆಟ್ಟದ ನಿವಾಸಿಗಳ ಹೆಜ್ಜೆಗಳಲ್ಲಿ ನಡೆಯುತ್ತಿರುವ ಅನುಭವವಾಗುತ್ತದೆ.
ಇಲ್ಲಿ ಪ್ರಥಮವಾಗಿ ಉತ್ಖನನ ಕೈಗೊಂಡವರು ಎಂ.ಎಸ್. ನಾಗರಾಜ ರಾವ್. ಅವರು ನವೆಂಬರ್ 1963ರಿಂದ ಮಾರ್ಚ್ 1964ರವರೆಗೆ ಎಚ್.ಡಿ. ಸಂಕಾಲಿಯಾ ಅವರೊಂದಿಗೆ ಸೇರಿ ತೆಕ್ಕಲಕೋಟೆಯ ಬೆಟ್ಟಗಳಲ್ಲಿ ಉತ್ಖನನ ನಡೆಸಿದರು. 1965ರಲ್ಲಿ ಪೂನಾ ವಿಶ್ವವಿದ್ಯಾಲಯದಲ್ಲಿ “The Stone Age Hill Dwellers of Tekkalakota” ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಈ ಉತ್ಖನನದಿಂದ ತೆಕ್ಕಲಕೋಟೆ ಪೂರ್ವೈತಿಹಾಸಿಕ ಹಾಗೂ ನವಶಿಲಾಯುಗದ ತಾಣವೆಂದು ದೃಢಪಟ್ಟಿತು. ಅಲ್ಲದೆ ಇಲ್ಲಿನ ಜನರಿಗೆ ಚಿನ್ನದ ಕಿವಿಯ ಆಭರಣಗಳ ಬಳಕೆ ತಿಳಿದಿತ್ತು ಎಂಬುದಕ್ಕೂ ಪುರಾವೆಗಳು ದೊರಕಿವೆ. ಬೆಟ್ಟಗಳಲ್ಲಿ ಶಿಲಾ ವರ್ಣಚಿತ್ರಗಳು, ರೇಖಾಚಿತ್ರಗಳು ಮತ್ತು ಕುಟ್ಟುಚಿತ್ರಗಳ ಅವಶೇಷಗಳು ಪತ್ತೆಯಾಗಿವೆ.
ಬುದ್ಧಿವಂತ ಮಾನವನ ನೆಲೆ
ಇಲ್ಲಿನ ಬೆಟ್ಟಗಳಲ್ಲಿ ಸುಟ್ಟ ಬೂದಿದಿಬ್ಬಗಳು, ಕಪ್ಪು-ಕೆಂಪು ಬಣ್ಣದ ಮಡಿಕೆಗಳು, ಕಲ್ಲಿನ ಕೊಡಲಿಗಳು, ಚೂಪಾದ ಮೂಳೆ ಆಯುಧಗಳು ಹಾಗೂ ಕಲ್ಲು-ಬ್ಲೇಡ್ ತಯಾರಿಸುವ ಕೌಶಲ್ಯವಿದ್ದುದಕ್ಕೆ ಸಾಕ್ಷ್ಯಗಳು ದೊರೆತಿವೆ. ಕಲ್ಲಿನ ಕೊಡಲಿಗಳು ಸಾಮಾನ್ಯವಾಗಿ ಅಂಡಾಕಾರದ ವಿಭಾಗ ಮತ್ತು ಮೊನಚಾದ ತುದಿಯೊಂದಿಗೆ ತ್ರಿಕೋನಾಕೃತಿಯಲ್ಲಿದ್ದವು.
ಇಲ್ಲಿ ನಡೆದ ಉತ್ಖನನದಲ್ಲಿ ಮೂರು ಚಿನ್ನದ ಆಭರಣಗಳು ದೊರೆತಿದ್ದು, ಸ್ಥಳೀಯರಿಗೆ ಗಣಿಗಾರಿಕೆ ತಿಳಿದಿತ್ತೆಂದು ಸೂಚಿಸುತ್ತದೆ.
ನವಶಿಲಾಯುಗದ ಅದ್ಭುತಗಳ ಬೆಟ್ಟ
ಇಲ್ಲಿನ ಬೆಟ್ಟಗಳು ಜಾಗತಿಕವಾಗಿ ಮಹತ್ವದ ಪ್ರಾಗೈತಿಹಾಸಿಕ ಹಾಗೂ ಚಾಲ್ಕೋಲಿಥಿಕ್ ತಾಣಗಳೆಂದು ಗುರುತಿಸಲ್ಪಟ್ಟಿವೆ. ಆರಂಭಿಕ ಮಾನವನು ಗುಹೆಯಿಂದ ಹೊರಬಂದು ಹುಲ್ಲಿನ ಗುಡಿಸಲು ನಿರ್ಮಿಸಿ, ಮೂಲ ಕೃಷಿ ಕೈಗೊಂಡು, ಚಿನ್ನದ ಕಿವಿ ಆಭರಣ ತಯಾರಿಸಿದ ಅವಧಿಯ ಅವಶೇಷಗಳು ಇಲ್ಲಿ ಪತ್ತೆಯಾಗಿವೆ.
ಬೂದಿದಿಬ್ಬಗಳು
ಕಿ.ಪೂ. 3000ರಿಂದ 1200ರವರೆಗೆ ಕಾಲಕ್ಕೆ ಸೇರಿದ ನವಶಿಲಾಯುಗದ ಮಾನವರ ನೆಲೆಗಳಾಗಿದ್ದ ಬೂದಿದಿಬ್ಬಗಳು (ಕೆಲವೊಮ್ಮೆ ಕಿಟ್ಟಿ ಅಥವಾ ಇದ್ದಿಲು ದಿಬ್ಬಗಳು) ಮಾನವ ನಿರ್ಮಿತ ಭೂಆಕಾರಗಳಾಗಿವೆ. ಇವು ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಪುರಾತತ್ತ್ವ ಸ್ಮಾರಕಗಳು. ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಮತ್ತು ಸಂಗನಕಲ್ಲು ಪ್ರದೇಶಗಳಲ್ಲಿ ಇವು ಪತ್ತೆಯಾಗಿವೆ.
ಉತ್ಖನನದಲ್ಲಿ ದೊರೆತ ಚಿನ್ನದ ಕಿವಿಯ ಆಭರಣಗಳು ಹರಪ್ಪ ನಾಗರಿಕತೆ ಕಾಲದ ಚಿನ್ನದ ಬಳಕೆಯೊಂದಿಗೆ ಸಾಮ್ಯತೆಯನ್ನು ಹೊಂದಿವೆ. ನವಶಿಲಾಯುಗ ಸಂಸ್ಕೃತಿಯ ಉಜ್ಜುನಯಗೊಳಿಸಿದ ಕೊಡಲಿಗಳು, ಮಡಿಕೆಗಳು ಹಾಗೂ ಶಿಲಾಯುಧಗಳ ಅವಶೇಷಗಳು ಕಂಡುಬಂದಿವೆ.
ಆದರೆ ತೆಕ್ಕಲಕೋಟೆಯ ಹಿರೇಹರಳ, ಶಾಂತವರ್ತಿ ಬೆಟ್ಟ, ಕರಿಮಟ್ಟಿ ಗುಡ್ಡ, ಬೂದಿದಿಬ್ಬ ಮುಂತಾದ ತಾಣಗಳ ಪಳೆಯುಳಿಕೆಗಳು ಸಮರ್ಪಕ ಸಂರಕ್ಷಣೆ ಪಡೆಯದಿರುವುದು ದುರಾದೃಷ್ಟಕರ. ಇಲ್ಲಿನ ಕೆಲವು ವಸ್ತುಗಳನ್ನು ಲಂಡನ್ ಮ್ಯೂಸಿಯಂ, ಸಂಗನಕಲ್ಲು, ಹಂಪಿ ಹಾಗೂ ಪೂನಾ ವಸ್ತುಸಂಗ್ರಹಾಲಯಗಳಲ್ಲಿ ಸಂಗ್ರಹಿಸಲಾಗಿದೆ.
ಡಾ. ನಮಿತಾ ಸಂಜಯ್ ಸುಗಂಧಿ ಉತ್ಖನನ
ರಾಜ್ಯ ಪುರಾತತ್ವ ಇಲಾಖೆಯ ಜಿಲ್ಲಾ ಪುರಾತತ್ವ ಸರ್ವೇಕ್ಷಣಾಧಿಕಾರಿ ಹಾಗೂ ಉತ್ಖನನ ತಂಡದ ನಿರ್ದೇಶಕ ಡಾ. ಶೇಜೇಶ್ವರ ನಾಯಕ ಆರ್ ಅವರ ನೇತೃತ್ವದಲ್ಲಿ, ಅಮೆರಿಕದ ನ್ಯೂಯಾರ್ಕ್‌ನ ಹಾರ್ಟ್‌ವಿಕ್ ಕಾಲೇಜಿನ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ನಮಿತಾ ಸಂಜಯ್ ಸುಗಂಧಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಹಿರೇಹರಳ, ಬಾಳೆತೋಟ ಮತ್ತು ಗೌಡರಮೂಲೆ ಪ್ರದೇಶಗಳಲ್ಲಿ ನಡೆದ ಉತ್ಖನನದ ವೇಳೆ ಮೂರು ಅಸ್ಥಿಪಂಜರಗಳು ಪತ್ತೆಯಾಗಿದ್ದು ರಾಜ್ಯಾದ್ಯಂತ ಗಮನ ಸೆಳೆದಿತ್ತು.
ಉತ್ಖನನದಲ್ಲಿ ನವಶಿಲಾಯುಗದ ಜನರ ದಿನನಿತ್ಯ ಬಳಕೆಯ ಕಲ್ಲಿನ ಆಯುಧಗಳು, ಕೈಕೊಡಲಿ, ಪ್ರಾಣಿಗಳ ಹಲ್ಲು, ಒರಳು, ಗುಂಡು ಹಾಗೂ ಇತರೆ ಉಪಕರಣಗಳು ಪತ್ತೆಯಾಗಿವೆ. ಸುಮಾರು 3,500ರಿಂದ 5,000 ವರ್ಷಗಳ ಹಿಂದಿನ ಚರಿತ್ರೆ ಕುರಿತು ಮಹತ್ವದ ಮಾಹಿತಿಗಳು ಲಭ್ಯವಾಗಿವೆ.
ಸುಮಾರು 5.8 ಅಡಿ ಎತ್ತರದ ಮಾನವನ ಪಳಿಯುಳಿಕೆ ಪತ್ತೆಯಾಗಿದ್ದು, ಶವದ ಮೇಲೆ ಕಲ್ಲುಗಳನ್ನು ಇಟ್ಟು ಸಂಸ್ಕಾರ ಮಾಡುವ ಪದ್ಧತಿ ಇದ್ದುದಾಗಿ ತಿಳಿದುಬರುತ್ತದೆ. ವಿವಿಧ ಗಾತ್ರದ ಮಡಿಕೆಗಳಲ್ಲಿ ಮೂಳೆಗಳು ಪತ್ತೆಯಾಗಿದ್ದು, ಅವುಗಳನ್ನು ಶವಸಂಸ್ಕಾರಕ್ಕೆ ಬಳಸಿದ್ದರೆಂದು ಊಹಿಸಲಾಗಿದೆ.
ಗ್ರೀಸ್ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞೆ ಸುಸೇನ್ ಕ್ರಿಕ್ ಪ್ಯಾಟ್ರಿಕ್ ಸ್ಮಿತ್ ಅವರಿಂದ ಪಳಿಯುಳಿಕೆಗಳ ಸಂರಕ್ಷಣೆ ಮತ್ತು ಕಾಲಮಾನ ಅಧ್ಯಯನ ಕುರಿತು ಸಲಹೆ ಪಡೆಯಲಾಗಿದೆ ಎಂದು ಡಾ. ನಮಿತಾ ತಿಳಿಸಿದ್ದಾರೆ.
2005ರಲ್ಲಿ ಡಾ. ನಮಿತಾ ಎಸ್. ಸುಗಂಧಿ ಉತ್ಖನನ ಕಾರ್ಯ ಆರಂಭಿಸಿ, ನಂತರವೂ ನಿರಂತರವಾಗಿ ಅಧ್ಯಯನ ಮುಂದುವರೆಸಿದರು. 2019ರಲ್ಲಿ ಮತ್ತೊಮ್ಮೆ ಅಧ್ಯಯನ ಕೈಗೊಂಡು, 2022ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊಫೆಸರ್ ಶೋಭಾ ವಿ ಅವರೊಂದಿಗೆ ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ “ಮಾನವ ಮತ್ತು ಪರಿಸರ” ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು.