ADVERTISEMENT

ವಾಲ್ಮೀಕಿ ಸಮುದಾಯದ ಮೇಲೆ ಕಾಂಗ್ರೆಸ್‌ ದೌರ್ಜನ್ಯ: ಬಂಗಾರು ಹನುಮಂತ

ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಪ್ರತಿಭಟನೆ| ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ದುರ್ಬಳಕೆಯ ಆರೋಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:08 IST
Last Updated 14 ಆಗಸ್ಟ್ 2025, 5:08 IST
ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ರಾಜ್ಯ ಸರ್ಕಾರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಬುಧವಾರ ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಚಿವ ಸಂಸದ ಸಣ್ಣಪಕ್ಕೀರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್‌ ಕುಮಾರ್‌ ಇದ್ದರು.
ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ರಾಜ್ಯ ಸರ್ಕಾರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಬುಧವಾರ ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಚಿವ ಸಂಸದ ಸಣ್ಣಪಕ್ಕೀರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್‌ ಕುಮಾರ್‌ ಇದ್ದರು.   

ಬಳ್ಳಾರಿ: ಕಾಂಗ್ರೆಸ್‌ ಸರ್ಕಾರ ವಾಲ್ಮೀಕಿ ಸಮುದಾಯದ ಮೇಲೆ ದೌರ್ಜನ್ಯ ಮಾಡುತ್ತಿದೆ. ಎಸ್‌ಎಸ್‌ಪಿ ಟಿಎಸ್‌ಪಿ ಅನುದಾದನ ದುರ್ಬಳಕೆ ಮತ್ತು ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿಯ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತ ಆರೋಪಿಸಿದ್ದಾರೆ. 

ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರಾಜಣ್ಣ ಅವರನ್ನು ಸಂಪುಟದಲ್ಲಿ ವಜಾ ಮಾಡಲಾಯಿತು. ನಾಗೇಂದ್ರ ಅವರನ್ನು ಹಗರಣದಲ್ಲಿ ಸಿಲುಕಿಸಿ ರಾಜೀನಾಮೆ ಕೊಡಿಸಲಾಯಿತು. ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ವಾಲ್ಮೀಕಿ ಸಮುದಾಯದ ಅಧಿಕಾರಿ ದಯಾನಂದ ಅವರಿಗೆ ಶಿಕ್ಷೆ ಕೊಡಲಾಯಿತು. ಕೊಪ್ಪಳದಲ್ಲಿ ಗವಿಸಿದ್ದಪ್ಪ ಎಂಬ ವಾಲ್ಮೀಕಿ ಸಮುದಾಯದ ವ್ಯಕ್ತಿಯ ಹತ್ಯೆಯಾಯಿತು. ಇನ್ನು ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ದುರ್ಬಳಕೆಯಾಗುತ್ತಲೇ ಇದೆ’ ಎಂದು ಅವರು ಆರೋಪಿಸಿದರು. 

‘ವಾಲ್ಮೀಕಿ ಸಮುದಾಯದ 15 ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಸ್ವಾಭೀಮಾನವಿದ್ದರೆ ಇವರೆಲ್ಲ ರಾಜೀನಾಮೆ ನೀಡಿ ಹೊರಬೇಕು’ ಎಂದು ಅವರು ಆಗ್ರಹಿಸಿದರು. 

ADVERTISEMENT

ಸರ್ಕಾರದ ನಿಲುವು ಖಂಡಿಸಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ವೇಳೆ ಮಾಜಿ ಸಚಿವ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್‌ ಕುಮಾರ್‌ ಮತ್ತು ಇತರರು ಇದ್ದರು. 

ಸಮಾಜಕ್ಕೊಂದು, ಪಕ್ಷಕ್ಕೊಂದು ನಿಲುವು: ವಾಲ್ಮೀಕಿ ಹಗರಣ ನಡೆದಾಗ ನಾಗೇಂದ್ರ ರಾಜೀನಾಮೆ ಆಗ್ರಹಿಸಿದವರು ಈಗ ಅವರ ಪರವಾಗಿ ಮಾತನಾಡುತ್ತಿರುವುದು ಧ್ವಂಧ್ವ ನಿಲುವಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಂಗಾರು ಹನುಮಂತು. ಸಮಾಜ, ಪಕ್ಷ ಬೇರೆ ಬೇರೆ ಎಂದರು. ಹಾಗಾದರೆ, ಪಕ್ಷಕ್ಕೆ, ಸಮಾಜಕ್ಕೆ ಬೇರೆ ಬೇರೆ ನಿಲುವು ಇರುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ, ಹೌದು ಎಂದು ಉತ್ತರಿಸಿ ಗೊಂದಲ ಸೃಷ್ಟಿ ಮಾಡಿದರು. 

ಧರ್ಮಸ್ಥಳಕ್ಕೆ ಕಳಂಕ ತರವು ಪ್ರಯತ್ನ 

ಕೆಲ ಪುಡಾರಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸೋಮಶೇಖರ ರೆಡ್ಡಿ ಆರೋಪಿಸಿದರು.  ‘ಧರ್ಮಸ್ಥಳ ಅಭಿಮಾನಿಗಳ ವೇದಿಕೆ‘ ಹೆಸರಿನಲ್ಲಿ ಬುಧವಾರ ನಗರದಲ್ಲಿ ಬಿಜೆಪಿ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾನಾಡಿದ ಅವರು ‘ಧರ್ಮಸ್ಥಳದ ವಿಷಯಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆಯಾಗಿದೆ. ಅದು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ಕೊಡಬೇಕು. ಇದೇನಾದರೂ ಕೇವಲ ಅಪಪ್ರಚಾರವಷ್ಟೇ ಆಗಿದ್ದರೆ ಅವರಿಗೆ ಶಿಕ್ಷೆಯಾಗಬೇಕು’ ಎಂದು ಅವರು ಆಗ್ರಹಿಸಿದರು.  ಧರ್ಮಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಅದಕ್ಕೆ  ನಮ್ಮ ದಿಕ್ಕಾರವಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್‌ ಕುಮಾರ್‌ ಹೇಳಿದರು.  ಈ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರೂ ಪಾಲ್ಗೊಂಡಿದ್ದರು. 

ಮಹೇಶ್‌ ಗೌಡ ವಿರುದ್ಧ ದೂರು 

ಸಂಡೂರು ಪೊಲೀಸ್‌ ಠಾಣೆಯ ಸಿಪಿಐ ಮಹೇಶ್‌ ಗೌಡ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ಯಾರದ್ದೋ ಆಣತಿ ಮೇರೆಗೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು ಸಂಡೂರು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.