ADVERTISEMENT

ಮಹಿಳೆ ಅನುಮಾನಾಸ್ಪದ ಸಾವು ಆರೋಪ: ನೂರಾರು ಜನರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 8:39 IST
Last Updated 21 ಸೆಪ್ಟೆಂಬರ್ 2020, 8:39 IST
ಪ್ರತಿಭಟನಾಕಾರರು
ಪ್ರತಿಭಟನಾಕಾರರು   

ಹೊಸಪೇಟೆ: ಇಲ್ಲಿನ ಚಿತ್ತವಾಡ್ಗಿ ನಿವಾಸಿ ಗೌಸಿಯಾ ಎನ್ನುವವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ ಹಾಗೂ ಸಿಪಿಎಂ ಕಾರ್ಯಕರ್ತರು ಚಿತ್ತವಾಡ್ಗಿಯಲ್ಲಿ ನಡೆಸಿದ ಈ ಪ್ರತಿಭಟನೆಯಲ್ಲಿ ನೂರಾರು ಜನ ಸ್ಥಳೀಯರು ಪಾಲ್ಗೊಂಡಿದ್ದರು.

ಬಳಿಕ ಮಾತನಾಡಿದ ಜನವಾದಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರೋಜ, ‘ಗೌಸಿಯಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಆದರೆ, ಸ್ಥಳೀಯ ಕೆಲವರು ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಗೌಸಿಯಾಗೆ ನ್ಯಾಯ ಸಿಗಬೇಕೆಂಬ ಕಾರಣಕ್ಕಾಗಿ ಇಂದು ನೂರಾರು ಜನ ಸೇರಿದ್ದಾರೆ. ಹಾಗಾಗಿ ಪೊಲೀಸ್‌ ಇಲಾಖೆಯು ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ‘ಗೌಸಿಯಾ ಮನೆಯಲ್ಲಿ ಕಾಲು ಜಾರಿ ಬಿದ್ದು ಸತ್ತಿದ್ದಾಳೆ ಎಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ. ಆದರೆ, ಆಕೆಯ ಹಣೆ, ಕುತ್ತಿಗೆಗೆ ಬಲವಾದ ಗಾಯಗಳಾಗಿದ್ದವು. ಕಿರುಕುಳದಿಂದ ಆಕೆ ಸತ್ತಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಹಾಗಾಗಿ ತನಿಖೆ ನಡೆಸಿದರೆ ಎಲ್ಲವೂ ಬಯಲಾಗುತ್ತದೆ’ ಎಂದರು.

ಸಿಪಿಎಂ ಮುಖಂಡ ಕೆ.ಎಂ.ಸಂತೋಷ ಕುಮಾರ, ‘ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಎ.ಕರುಣಾನಿಧಿ, ಕೆ.ನಾಗರತ್ನ, ಆರ್.ಭಾಸ್ಕರ್‌ ರೆಡ್ಡಿ, ಇಸ್ಮಾಯಿಲ್, ರಾಮಣ್ಣ, ಪವನ್ ಕುಮಾರ್, ಕಲ್ಯಾಣಯ್ಯ, ಎಚ್‌.ಎಂ. ಜಂಬುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.