ADVERTISEMENT

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಡ್ರೋನ್ ಬಳಕೆ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:16 IST
Last Updated 17 ಸೆಪ್ಟೆಂಬರ್ 2025, 2:16 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಣಸಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಕೃಷಿಯಲ್ಲಿ ಡ್ರೋನ್‌ ಬಳಕೆ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿತೆ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಣಸಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಕೃಷಿಯಲ್ಲಿ ಡ್ರೋನ್‌ ಬಳಕೆ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿತೆ ನಡೆಯಿತು   

ದೊಡ್ಡಬಳ್ಳಾಪುರ: ಕೃಷಿ ಕಾರ್ಮಿಕರ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಸಸ್ಯ ಪೋಷಕಾಂಶಗಳನ್ನು ಸಿಂಪರಣೆ ಮಾಡಲು ಹೆಚ್ಚಿನ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಈ ದಿಸೆಯಲ್ಲಿ ರೈತರು ಡ್ರೋನ್‌ ಬಳಸಿ ನ್ಯಾನೊ ಯೂರಿಯಾ ಸಿಂಪಡಣೆ ಮಾಡುವುದು ಉತ್ತಮ ಮಾರ್ಗ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಪಿ.ರಾಘವೇಂದ್ರ ಹೇಳಿದರು.

ತಾಲ್ಲೂಕಿನ ಮೆಣಸಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ನಡೆದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ ಹಾಗೂ ಕೃಷಿಯಲ್ಲಿ ಡ್ರೋನ್‌ ಬಳಕೆ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೂರಿಯಾ ದೇಶದಲ್ಲಿ ಅತಿ ಹೆಚ್ಚು ಬಳಸುವ ರಸಗೊಬ್ಬರವಾಗಿದೆ. ಯೂರಿಯಾವನ್ನು ಮೇಲು ಗೊಬ್ಬರವಾಗಿ ಬಳಸಲಾಗುತ್ತದೆ. ಮಣ್ಣಿನ ಮೂಲಕ ಬೆಳೆಗೆ ನೀಡುವ ಯೂರಿಯಾ ರಸಗೊಬ್ಬರ ವಿವಿಧ ರೂಪಗಳಲ್ಲಿ ನಶಿಸಿ ಹೋಗುತ್ತದೆ. ಒಟ್ಟು ಬಳಸಿದ ಯೂರಿಯಾ ರಸಗೊಬ್ಬರದಲ್ಲಿ ಶೇ 30 ರಿಂದ 35ರಷ್ಟು ನೀರಿನೊಂದಿಗೆ ಹರಿದು ಹೋಗುತ್ತದೆ ಮತ್ತು ಕೆಳ ಪದರಗಳಲ್ಲಿ ಬಸಿದು ಹೋಗುವುದರಿಂದ ಪೂರ್ಣ ಪ್ರಮಾಣದ ಗೊಬ್ಬರ ಬೆಳೆಗಳಿಗೆ ಲಭ್ಯವಾಗುವುದಿಲ್ಲ. ನ್ಯಾನೊ ಯೂರಿಯಾ ಬಳಕೆಯಿಂದ ಯೂರಿಯಾ ರಸಗೊಬ್ಬರದ ಶೇ10 ರಷ್ಟು ಪ್ರಮಾಣ ಕಡಿತಗೊಳಿಸುವುದಲ್ಲದೆ, ಸಸ್ಯಗಳಿಗೆ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಸೂಕ್ತ ಸಮಯದಲ್ಲಿ ಒದಗಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ. ಡ್ರೋನ್‌ ಬಳಸಿ ನ್ಯಾನೊ ಯೂರಿಯಾ ಸಿಂಪಡಣೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ADVERTISEMENT

ಇಫ್ರೋ ಸಂಸ್ಥೆ ಚೇತನ್‌ ಮಾತನಾಡಿ, ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನ. ಈ ವಿಧಾನದಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ವಾತಾವರಣದಲ್ಲಿ ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಲಿದೆ ಮತ್ತು ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೊ ಯೂರಿಯಾ ಸಿಂಪಡಣೆಯು ಯೋಗ್ಯ ಮಾರ್ಗವಾಗಿದೆ ಎಂದರು.

ರಾಗಿ ಬೆಳೆಗೆ ಡ್ರೋನ್‌ ಬಳಸಿ ನ್ಯಾನೊ ಯೂರಿಯಾ ಸಿಂಪಡಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿತೆ ಮೂಲಕ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌, ಉಪಾಧ್ಯಕ್ಷೆ ಲಕ್ಷ್ಮಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಅಶ್ವತ್ಥಕುಮಾರ್, ಮುನಿರಾಜು, ಮುರಳಿ, ರಾಜಮ್ಮ, ಮೆಣಸಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪಾಪಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.