
ವಿಜಯಪುರ (ದೇವನಹಳ್ಳಿ): ಈಗಾಗಲೇ ಚಳಿಯಿಂದ ನಡಗಿರುವ ಜನರ ಮೇಲೆ ಬಕುಂಗ್ ಚಂಡುಮಾರುತ ‘ಶೀತಲ ಸಮರ’ ಘೋಷಿಸಿದೆ. ಹಿಂದೂ ಮಹಾಸಾಗರದಲ್ಲಿ ರೂಪುಗೊಂಡಿರುವ ಬಕುಂಗ್ ಚಂಡಮಾರುತದ ಎಫೆಕ್ಟ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಲೆಯೂ ಪ್ರಭಾವ ಬೀರಿದ್ದು, ಮಂಗಳವಾರ ಮಂಜು, ಶೀತ ಗಾಳಿಯಿಂದೊಂದಿಗೆ ದಿನವೀಡಿ ಮೋಡ ಕವಿದ ವಾತಾವರಣ ಕಂಡು ಬಂತು.
ಬಕುಂಗ್ ಚಂಡಮಾರುತದ ಪರಿಣಾಮದಿಂದ ಬೆಳಗ್ಗೆ 9 ರವರೆಗೂ ದಟ್ಟವಾದ ಮಂಜು ಜನರನ್ನು ಕಾಡಿದರೆ, ಸಂಜೆ ವರೆಗೂ ಮೋಡ ಕವಿದ ವಾತಾವರಣ, ಶೀತಗಾಳಿ ಚಳಿ ಕೊರತೆದಿಂದಾಗಿ ವೃದ್ಧರು, ಮಕ್ಕಳು ಮನೆಗಳಿಂದ ಹೊರಬಾರದಂತೆ ಮಾಡಿತು.
ವಿಜಯಪುರ ಹೋಬಳಿಯಲ್ಲಿ ಗರಿಷ್ಠ 22 ಮತ್ತು ಕನಿಷ್ಟ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು. ಶೀತ ಗಾಳಿಯೊಂದಿಗೆ ಮೋಡಕವಿದ ವಾತಾವರಣ ಮುಂದುವರೆದಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಇತರೆ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಬೆಚ್ಚನೆಯ ಹೊದಿಕೆಗಳಿಗೆ ಬೇಡಿಕೆ: ಈಗಾಗಲೇ ಚಳಿಗಾಲವು ಆರಂಭವಾಗಿದ್ದು, ಹಿಂದಿಗಿಂತಲೂ ಪ್ರಸ್ತುತ ಚಳಿಯು ಹೆಚ್ಚಾಗಿರುವ ಪರಿಣಾಮ ಜನತೆಗೆ ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಇದನ್ನರಿತ ವ್ಯಾಪಾರಿಗಳು ಬಗೆಬಗೆಯ ಬೆಚ್ಚನೆಯ ಉಡುಪುಗಳು, ಹೊದಿಕೆಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಸೆಳೆಯುತ್ತಿರುವುದು ಕಂಡು ಬಂದಿದೆ. ಇನ್ನು ಕೆಲವರು ರಸ್ತೆಬದಿಗಳಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರದು ಬೆಚ್ಚನೆಯ ಉಡುಪುಗಳ ಮಾರಾಟಕ್ಕಿಟ್ಟಿದ್ದು, ಜನರು ಖರೀದಿಸುವತ್ತ ಮುಖ ಮಾಡಿದ್ದಾರೆ.
ಪ್ರಸ್ತುತ ಹೋಬಳಿಯ ಬಹುತೇಕ ಕಡೆಗಳಲ್ಲಿ ಯಂತ್ರಗಳಿಂದ ರಾಗಿ ಕೊಯ್ಲು ಕಾರ್ಯ ನಡೆಸುತ್ತಿರುವ ರೈತರಿಗೆ ಬಕುಂಗ್ ಚಂಡಮಾರುತ ಆತಂಕ ತರಿಸಿದೆ. ಈಗ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿರುವುದರಿಂದ ರಾಗಿ ಕೊಯ್ಲಿಗೆ ಹಿಂದೇಟು ಹಾಕುವಂತಾಗಿದೆ. ಇದರಿಂದ ಕಟಾವು ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ತಲೆದೂರಿದೆ. ಇನ್ನೂ ಮೂರು ದಿನಗಳ ಕಾಲ ಶೀತಗಾಳಿಯೊಂದಿಗೆ ಮೋಡಕವಿದ ವಾತಾವರಣ ಇರಲಿದೆ ಎನ್ನಲಾಗಿದ್ದು. ಇದರಿಂದ ಕೃಷಿ ತೋಟಗಾರಿಕೆ ಹೂ ಬೆಳೆಗಳಲ್ಲಿ ರೋಗಬಾಧೆ ಹೆಚ್ಚು ಕಂಡುಬರುವ ಆತಂಕ ರೈತರಲ್ಲಿ ಮನೆ ಮಾಡಿದೆ. ರೇಷ್ಮೆಗೂ ಸಂಕಷ್ಟ ಬೆಳಗ್ಗಿನ ಜಾವದಿಂದಲೇ ಶೀತಗಾಳಿಯೊಂದಿಗೆ ಮೋಡ ಕವಿದ ವಾತಾವರಣ ಇರುವುದರಿಂದ ರೇಷ್ಮೆ ಹುಳ ಸಾಕುತ್ತಿರುವ ರೈತರಿಗೂ ಸಂಕಷ್ಟ ತರಿಸಿದೆ. ಈಗಿನ ವಾತಾವರಣದಿಂದ ಹುಳು ಮನೆ ಹೆಚ್ಚು ಥಂಡಿ ಉಂಟಾಗಿ ಹುಳುವಿನಲ್ಲಿ ರೋಗ ಬಾಧೆ ಹೆಚ್ಚು ಕಾಣಿಸಿಕೊಳ್ಳುವ ಆತಂಕ ಇದೆ ಎಂದು ರೇಷ್ಮೆ ಬೆಳೆಗಾರ ಗೋಪಾಲ್ ಹೇಳುತ್ತಾರೆ.
ಸಾಮಾನ್ಯವಾಗಿ ಶೀತ ವಾತಾವರಣದಲ್ಲಿ ಜನತೆಗೆ ಟೀ-ಕಾಫಿ ಹಾಗೂ ಬಿಸಿಯಾದ ಆಹಾರಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಜನರು ಮನೆಗಳಿಂದ ಹೊರಬರಲಾರದಷ್ಟು ಚಳಿಯಿರುವುದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ.–ಬಾಬು, ಟೀ ಅಂಗಡಿ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.