
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪಿಕ್ ಅಪ್ ಪಾರ್ಕಿಂಗ್ ಶುಲ್ಕ ಜಾರಿಯಾಗಿ ಒಂದು ವಾರ ಕಳೆದಿದ್ದು, ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸುರಕ್ಷತೆ ದೃಷ್ಟಿಯಿಂದ ಜಾರಿಗೊಳಿಸಲಾದ ಈ ನಿಯಮಗಳು ಕೆಲವರಿಗೆ ಅನುಕೂಲಕರವಾಗಿದ್ದರೆ, ಇನ್ನೂ ಕೆಲವರಿಗೆ ಅಸಮಾಧಾನಕ್ಕೆ ಕಾರಣವಾಗಿವೆ.
ಹೊಸ ನಿಯಮದಂತೆ ಆಗಮನ ದ್ವಾರಗಳ ಬಳಿ ಕೇವಲ ಖಾಸಗಿ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹಳದಿ ಬೋರ್ಡ್ (ಟ್ಯಾಕ್ಸಿ) ವಾಹನಗಳನ್ನು ನಿಗದಿತ ಟ್ಯಾಕ್ಸಿ ಸ್ಟ್ಯಾಂಡ್ ಹಾಗೂ ಪಿಕ್ ಅಪ್ ವಲಯಗಳಿಗೆ ಮಾತ್ರ ನಿರ್ಬಂಧಿಸಲಾಗಿದೆ. ಈ ವ್ಯವಸ್ಥೆಯನ್ನು ಡಿ.11ರಿಂದ ಟರ್ಮಿನಲ್–2ರಲ್ಲಿ ಹಾಗೂ ಡಿ.13ರಿಂದ ಟರ್ಮಿನಲ್–1ರಲ್ಲಿ ಜಾರಿಗೆ ತರಲಾಗಿದೆ.
ಟರ್ಮಿನಲ್–2ರಲ್ಲಿ ವ್ಯವಸ್ಥೆ ಬಹುತೇಕ ಸರಾಗವಾಗಿ ನಡೆಯುತ್ತಿದರೂ ಟರ್ಮಿನಲ್–1ರಲ್ಲಿ ಆಗಮನ ದ್ವಾರಗಳಿಂದ ಸುಮಾರು 700 ಮೀಟರ್ ದೂರದಲ್ಲಿರುವ ಪಿ3 ಮತ್ತು ಪಿ4 ಪಾರ್ಕಿಂಗ್ ಸ್ಥಳಕ್ಕೆ ನಡೆದುಕೊಂಡು ಹೋಗುವುದು ಪ್ರಯಾಣಿಕರಲ್ಲಿ ಬೇಸರ ಉಂಟು ಮಾಡಿದೆ.
ಈ ಮೊದಲು ಆಗಮನ ದ್ವಾರದಿಂದ ಹೊರಬಂದ ತಕ್ಷಣ ಟ್ಯಾಕ್ಸಿ ಸಿಗುತ್ತಿದ್ದವು. ಈಗ ಟ್ಯಾಕ್ಸಿ ಹತ್ತಲು ಲೇಗೇಜ್ ಹೊತ್ತುಕೊಂಡು ಪಿ3 ಪಾರ್ಕಿಂಗ್ ಜಾಗಕ್ಕೆ ಹೋಗುವುದು ಪ್ರಯಾಸಕರ ಕೆಲಸ. ಇಲ್ಲಿ ಕೆಲಸ ಮಾಡುವ ವಿಮಾನ ನಿಲ್ದಾಣ ಸಿಬ್ಬಂದಿಗೆ ಇನ್ನಷ್ಟು ತರಬೇತಿ ನೀಡಬೇಕು. ವೃತ್ತಿಪರತೆ ಮಾಯಾಗುತ್ತಿದೆ ಎನ್ನುತ್ತಾರೆ ಬೆಂಗಳೂರಿನ ಗಜೇಂದ್ರ.
‘ವಯಸ್ಸಾದ ನನ್ನ ತಾಯಿಯನ್ನು ಟ್ಯಾಕ್ಸಿ ನಿಲುಗಡೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾನದ ಸಿಬ್ಬಂದಿ ಸೂಚನೆ ಮೇರೆಗೆ 20 ನಿಮಿಷ ಕಾಯ್ದರೂ ಬ್ಯಾಟರಿ ಚಾಲಿತ ವಾಹನ (ಬಗಿ) ಬರಲಿಲ್ಲ. ಕೊನೆಗೂ ಅಸಹಾಯಕನಾಗಿ ನಿಧಾವಾಗಿ ಅವರನ್ನು ನಡೆಸಿಕೊಂಡೇ ಪಾರ್ಕಿಂಗ್ ಜಾಗಕ್ಕೆ ಕರೆದೊಯ್ಯಬೇಕಾಯಿತು’ ಎಂದು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ನಾರಾಯಣ್ ಎಕ್ಸ್‌ನಲ್ಲಿ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.
ಇದರ ನಡುವೆ, ಹೊಸ ವ್ಯವಸ್ಥೆಯಿಂದ ಸುರಕ್ಷತೆ ಹೆಚ್ಚಿದ್ದು, ಆಗಮನ ದ್ವಾರಗಳಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದು ಕೆಲವು ಪ್ರಯಾಣಿಕರು ಶ್ಲಾಘಿಸಿದ್ದಾರೆ.
ಮೊದಲು ಟ್ಯಾಕ್ಸಿಗಳಿಂದ ಆಗಮನ ದ್ವಾರಗಳಲ್ಲಿ ಗೊಂದಲ ಇರುತ್ತಿತ್ತು. ಈಗ ಹೊಸ ನಿಯಮದ ನಂತರ ಪರಿಸ್ಥಿತಿ ಸುಧಾರಿಸಿದೆ ಎಂದು ಕೆಲ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಚಾರ ನಿಯಂತ್ರಣ ಮತ್ತು ಸುರಕ್ಷತೆ ದೃಷ್ಟಿಯಿಂದ ಹೊಸ ಪಿಕ್ ಅಪ್ ವ್ಯವಸ್ಥೆ ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ಆದರೆ, ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡುವ ಅಗತ್ಯ ಇದೆ. ವಿಮಾನ ನಿಲ್ದಾಣದ ಸಿಬ್ಬಂದಿಗೆ ತುರ್ತಾಗಿ ತರಬೇತಿ ನೀಡಬೇಕು ಎಂದು ಕೆಲವು ಪ್ರಯಾಣಿಕರು ಸಲಹೆ ನೀಡಿದ್ದಾರೆ.
ಕ್ರಿಸ್‌ಮಸ್ ರಜೆಯಿಂದಾಗಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟಿಕೊಂಡು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ(ಬಿಐಎಎಲ್) ಹಿರಿಯ ನಾಗರಿಕರು ಮಕ್ಕಳು ಮತ್ತು ಅಂಗವಿಕಲರಿಗೆ ಅನುಕೂಲವಾಗುವಂತೆ ಟರ್ಮಿನಲ್‌ನಿಂದ ಪಾರ್ಕಿಂಗ್ ಜಾಗಕ್ಕೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿದೆ. ಟರ್ಮಿನಲ್–1ರಿಂದ ಪಿ3 ಮತ್ತು ಪಿ4 ಪಾರ್ಕಿಂಗ್ ವಲಯಗಳಿಗೆ ನಾಲ್ಕು ಬಗಿ (ಬ್ಯಾಟರಿ ಚಾಲಿನ ವಾಹನ) ಒಂದು ಶಟಲ್ ಬಸ್ ಪ್ಯಾಸೆಂಜರ್ ವ್ಯಾನ್ ಮತ್ತು ಮೂರು ಕಾರುಗಳನ್ನು ನಿಯೋಜಿಸಲಾಗಿದೆ. ಜೊತೆಗೆ ವ್ಹೀಲ್‌ಚೇರ್ ವ್ಯವಸ್ಥೆ ಮಾಡಿದೆ. ಟರ್ಮಿನಲ್–1 ಮತ್ತು ಟರ್ಮಿನಲ್–2 ನಡುವಿನ ಶಟಲ್ ಬಸ್‌ಗಳು ಪಿ3 ಹಾಗೂ ಪಿ4 ಪಾರ್ಕಿಂಗ್ ಸಮೀಪ ನಿಲುಗಡೆ ಮಾಡುವ ವ್ಯವಸ್ಥೆಯಿದ್ದರೂ ಈ ಸೌಲಭ್ಯದ ಬಗ್ಗೆ ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ಲಭ್ಯ ಇಲ್ಲದಿರುವುದರಿಂದ ಇದರ ಉಪಯೋಗವೂ ಸೀಮಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.